ಬಿನ್ ಲಾಡೆನ್ ಗೆ ಆಶ್ರಯ ನೀಡಿದ್ದು, 130 ನಿಷೇಧಿತ ಉಗ್ರರ ಪೋಷಿಸಿದ್ದು ಯಾರು?: ಪಾಕ್ ಮಾನ ಹರಾಜು ಹಾಕಿದ ಭಾರತ

ವಿಶ್ವಸಂಸ್ಥೆ: ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕಾಲು ಕೆರೆಯುತ್ತಿರುವ ಪಾಕಿಸ್ತಾನದ ಮಾನವನ್ನು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದು, ಬಿನ್ ಲಾಡೆನ್ ಗೆ ಆಶ್ರಯ ನೀಡಿದ್ದು, 130 ನಿಷೇಧಿತ ಉಗ್ರರ ಪೋಷಿಸಿದ್ದು ಯಾರು? ಎಂದು ಪ್ರಶ್ನೆ ಮಾಡಿದೆ.

ವಿಶ್ವಸಂಸ್ಥೆಯ ಸಭೆಯಲ್ಲಿ ಚರ್ಚಾ ಸಂದರ್ಭದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವಾಲಯದ ಮೊದಲ ಕಾರ್ಯದರ್ಶಿ ವಿಧಿಶಾ ಮೈತ್ರಾ ಅವರು, ಬಿನ್ ಲಾಡೆನ್ ಗೆ ಆಶ್ರಯ ನೀಡಿದ್ದು, 130 ನಿಷೇಧಿತ ಉಗ್ರರ ಪೋಷಿಸಿದ್ದು ಯಾರು?…. ಉಗ್ರರಿಗೆ ಪಿಂಚಣಿ ನೀಡುತ್ತಿದ್ದೇವೆ ಎಂದು ಪಾಕ್​ ಒಪ್ಪಿಕೊಳ್ಳಲಿದೆಯೇ..? ಎಂದು ಪ್ರಶ್ನಿಸಿದ್ದಾರೆ.

ಅಣ್ವಸ್ತ್ರ ಸಹಿತ ರಾಷ್ಟ್ರಗಳ ನಡುವೆ ಯುದ್ಧ ನಡೆದ ಅದರ ಪರಿಣಾಮವನ್ನು ಇಡೀ ವಿಶ್ವವೇ ಅನುಭವಿಸಬೇಕು ಎನ್ನುವ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಉಗ್ರರಿಗೆ ಪಿಂಚಣಿ ನೀಡುತ್ತಿರುವ ವಿಚಾರವನ್ನು ಪಾಕ್​ ಒಪ್ಪಿಕೊಳ್ಳಲಿದೇಯೇ ಎಂದು ಪ್ರಶ್ನಿಸಿದ್ದಾರೆ. ಅಂತೆಯೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ಕುರಿತು ಟೀಕಾ ಪ್ರಹಾರ ನಡೆಸಿದ ಅವರು, ‘ಇಮ್ರಾನ್​ ಖಾನ್​ ಮಾತನಾಡಿದ್ದರ ಅರ್ಥ ಹೇಗಿತ್ತು ಎಂದರೆ ತಿಕ್ಕಾಟ ನಡೆಯುತ್ತಿರುವುದು ಅಮೆರಿಕ ಮತ್ತು ಅವರ ನಡುವೆ, ಶ್ರೀಮಂತರು-ಬಡವರು, ಉತ್ತರ ಮತ್ತು ದಕ್ಷಿಣ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ, ಮುಸ್ಲಿಂ ಮತ್ತು ಇತರರ ನಡುವೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ರಕ್ತದೋಕುಳಿ, ದಂಗೆ ಏಳುವಿಕೆಯಂತಹ ಹೇಳಿಕೆಗಳು ಪಾಕಿಸ್ತಾನದ ಪ್ರಧಾನಿಗೆ ಶೋಭಿಸುವುದಿಲ್ಲ.  21ನೇ ಶತಮಾನದ ಹೊಸ್ತಿಲಲ್ಲಿ ಇಂತಹ ನಡೆ ಇತರೆ ರಾಷ್ಟ್ರಗಳ ಮೇಲೂ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಟೀಕಿಸಿದರು.

ಅಂತೆಯೇ ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಅಲ್​-ಖೈದಾ ಹಾಗೂ ಇತರರ ಸಂಘಟನೆಯ 130 ಉಗ್ರರಿಗೆ ಪಿಂಚಣಿ ನೀಡುತ್ತಿರುವ ಏಕೈಕ ರಾಷ್ಟ್ರ ಎಂದರೆ ಅದು ಪಾಕಿಸ್ತಾನ ಮಾತ್ರ. ಈ ಬಗ್ಗೆ ಪ್ರಶ್ನೆ ಮಾಡಿದರು ಅದು ಸತ್ಯಾಂಶವನ್ನು ಒಪ್ಪಿಕೊಳ್ಳುತ್ತದೆಯೇ ಎಂದು ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ