ಯಲಹಂಕ, ಸೆ.24- ಪಶ್ಚಿಮದ ಮಾದರಿಯ ಪ್ರಗತಿಯನ್ನು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಅಳವಡಿಸಿಕೊಂಡಿದ್ದೇ ನಮ್ಮ ದೇಶದ ಅಪೂರ್ವ ನಿಸರ್ಗದ ವಿನಾಶಕ್ಕೆ ಕಾರಣ. ಆ ಪ್ರಗತಿ ತರುವ ನಾಗರಿಕತೆಯನ್ನು ಕಟ್ಟಲು ಸುತ್ತಣ ನಿಸರ್ಗವನ್ನೇ ಕೊಳ್ಳೆಹೊಡೆದದ್ದರಿಂದ ನಾವಿಂದು ರಾಜ್ಯ ಏಕೆ ದೇಶದ ಜೀವನಾಡಿಯಾದ ಪಶ್ಚಿಮ ಘಟ್ಟವನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿದ್ದೇವೆ ಎಂದು ಪ್ರಸಿದ್ಧ ಪರಿಸರ ತಜ್ಞ ಹಾಗೂ ಚಲನಚಿತ್ರ ನಿರ್ದೇಶಕ ಸುರೇಶ್ಹೆಬ್ಳೀಕರ್ ಆತಂಕ ವ್ಯಕ್ತಪಡಿಸಿದರು.
ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘಟನೆ ಚಿಗುರು ಆಯೋಜಿಸಿದ್ದ ನಮ್ಮ ನೆಲ-ನಮ್ಮ ಜಲ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, 65ಕ್ಕೂ ಅಧಿಕ ಜೀವನದಿಗಳಿಗೆ ಜನ್ಮಸ್ಥಾನವಾಗಿರುವ ನಮ್ಮ ಪಶ್ಚಿಮ ಘಟ್ಟ ಕುಸಿಯುತ್ತಿದೆ ಎಂಬುದು ನಾವು ನಡೆದು ಬಂದ ದಾರಿಯಲ್ಲಿನ ಘೋರ ತಪ್ಪುಗಳನ್ನು ನಾವೇ ಕಂಡುಕೊಳ್ಳುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದುರಂತವೆಂದರೆ ಮನುಷ್ಯ ಹೆಚ್ಚು ಹೆಚ್ಚು ಕಲಿತಷ್ಟೂ ನಿಸರ್ಗ ವಿರೋಧಿಯಾಗುತ್ತಾನೆ. ಹಿಂದೆ ಕಾಡುಗಳು ಇದ್ದವು. ಜೀವ ವೈವಿಧ್ಯ ಇತ್ತು. ಕಾಡು ಮತ್ತು ಸಮಾಜಗಳ ನಡುವೆ ದೈವಿಕ ಸಂಬಂಧವಿತ್ತು ಎಂದರು.
ನಿವೃತ್ತ ಅರಣ್ಯಾಧಿಕಾರಿ ಎಸ್.ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಅರಣ್ಯಯೋಜನೆಯನ್ನು ನಿಷ್ಠೆಯಿಂದ ಅನುಷ್ಠಾನಗೊಳಿಸಿದರೆ ಮಾತ್ರ ನಮ್ಮ ಕೆರೆಗಳು ಜೀವಂತಿಕೆ ಪಡೆಯುತ್ತವೆ ಹಾಗೂ ಭೂಮಿ ಫಲವತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆಚ್.ಸಿ. ನಾಗರಾಜ್ ಭೂಮಿಯ ಮೇಲಿರುವ ಓಜೋನ್ ಪದರವನ್ನು ಕಾಪಾಡಿಕೊಳ್ಳದಿದ್ದರೆ ಇಡೀ ವಿಶ್ವವೇ ನಾಶವಾಗುತ್ತದೆ ಎಂಬ ಪರಿಸರ ತಜ್ಞರ ನುಡಿಯನ್ನು ಎಲ್ಲ ದೇಶಗಳೂ ನಿರ್ಲಕ್ಷಿಸಿವೆ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ, ಚಿಗುರು ಬಳಗದ ಶಿಕ್ಷಕ ಸಂಯೋಜಕಿ ಪ್ರೊ.ಎನ್.ನಳಿನಿ ಹಾಗೂ ಡೀನ್ ಪ್ರೊ.ವಿ.ಶ್ರೀಧರ್ ಉಪಸ್ಥಿತರಿದ್ದರು.