ಹದ್ದನ್ನು ಗಿಳಿ ಎಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.24- ನಲವತ್ತು ವರ್ಷಗಳ ರಾಜಕೀಯ ಅನುಭವದ ಹೊರತಾಗಿಯೂ ಹದ್ದನ್ನು ಗಿಳಿ ಎಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು ಅದು ಕುಕ್ಕದೇ ಬಿಡುತ್ತದೆಯೇ ಎಂದು ಟ್ವಿಟ್ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ನಾಯಕರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

ಮೊನ್ನೆ ನಗರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‍ಕುಮಾರ್ ಅವರು ಅತೃಪ್ತ ಶಾಸಕರನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಅವರು ಗಿಳಿಗಳೆಂದು ಭಾವಿಸಿ ಕೆಲವರನ್ನು ಸಾಕಿದ್ದರು. ಅವು ಹದ್ದಾಗಿ ಕುಕ್ಕಿದವು ಎಂದು ಹೇಳಿದ್ದರು.

ಅದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುವ ಮೂಲಕ 14 ತಿಂಗಳು ಸಮ್ಮಿಶ್ರ ಸರ್ಕಾರದ ಸೌಹಾರ್ದಯುತ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿದ್ದರು.

ಕುಮಾರಸ್ವಾಮಿ ಅವರ ಆರೋಪಕ್ಕೆ ಇಂದು ಚುಟುಕಾಗಿ ಉತ್ತರಿಸಿರುವ ಸಿದ್ದರಾಮಯ್ಯ ಅವರು, ಹೌದು. ಕುಮಾರಸ್ವಾಮಿ ಅವರೇ ನಾನು ನಂಬಿದ್ದ ಗಿಳಿಗಳು ಹದ್ದಾಗಿ ಕಾಡಿದ್ದು ನಿಜ. ನನ್ನದೇ ತಪ್ಪು. ನಾಲ್ಕು ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಳಿ ಎಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಕುಕ್ಕದೇ ಬಿಡುತ್ತಾ. ಅನುಭವಕ್ಕಿಂತ ದೊಡ್ಡ ಪಾಠ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿದ್ದರಾಮಯ್ಯ ಅವರು ಉಪ ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷದ ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸುವುದಕ್ಕಿಂತಲೂ ಹೆಚ್ಚಾಗಿ ದೋಸ್ತಿ ಪಕ್ಷದ ವಿರುದ್ಧವೇ ಹರಿಹಾಯುತ್ತಿರುವುದು ಹಲವರನ್ನು ಹುಬ್ಬೇರುವಂತೆ ಮಾಡಿದೆ.

ಹದಿನೈದು ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಸ್ನೇಹಮಯ ಹೋರಾಟಕ್ಕಿಳಿಯಲಿವೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿತ್ತು. ಎರಡು ಪಕ್ಷಗಳು ಚುನಾವಣೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಆದರೆ, ಅದರ ಹಿಂದೆ ರಾಜಕೀಯ ಲೆಕ್ಕಾಚಾರ ಇರಲಿದೆ. ಬಿಜೆಪಿಯ ಮತಬ್ಯಾಂಕನ್ನು ಒಡೆದು ಚುನಾವಣೆಯಲ್ಲಿ ಸೋಲಿಸಲು ಎರಡು ಪಕ್ಷಗಳ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಎಂಬ ಮಾತುಗಳಿದ್ದವು.

ಆದರೆ, ಚುನಾವಣೆಯ ಹೊಸ್ತಿಲಿನಲ್ಲೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ತಮ್ಮ ಎದುರಾಳಿಗಿಂತಲೂ ತಮ್ಮತಮ್ಮಲ್ಲೇ ಕಚ್ಚಾಟ ಆರಂಭಿಸಿರುವುದು ಆಶ್ಚರ್ಯ ಮೂಡಿಸಿದೆ.

ಕಾಂಗ್ರೆಸ್ ನಾಯಕರು ಜೆಡಿಎಸ್ ಜತೆಗಿನ ಮೈತ್ರಿಯ ಬಗ್ಗೆ ಆತಂರಿಕವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ, ನಿನ್ನೆ ಕುಮಾರಸ್ವಾಮಿ ಅವರು ಬಹಿರಂಗವಾಗಿಯೇ ಕೈ ನಾಯಕರ ವಿರುದ್ಧ ಯುದ್ಧ ಘೋಷಣೆ ಮಾಡಿದ್ದಾರೆ.

ಇದಕ್ಕೂ ಮುನ್ನ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಸಿದ್ದರಾಮಯ್ಯ ಅವರ ವಿರುದ್ಧ ಸಣ್ಣ ಪ್ರಮಾಣದ ಅಸಮಾಧಾನವನ್ನು ಹೊರ ಹಾಕಿದ್ದರು. ಈಗ ಸಿದ್ದರಾಮಯ್ಯ ಅವರ ತಿರುಗೇಟಿನಿಂದ ಎರಡೂ ಪಕ್ಷಗಳ ಮೈತ್ರಿ ಸಂಪೂರ್ಣವಾಗಿ ಮುರಿದು ಬಿದ್ದಂತಾಗಿದೆ.
ಸಿದ್ದರಾಮಯ್ಯ ಅವರ ಟ್ವಿಟ್‍ಗೆ ಜೆಡಿಎಸ್‍ಗಿಂತಲೂ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರೇ ಹೆಚ್ಚು ವಿರೋಧ ವ್ಯಕ್ತಪಡಿಸಿ ಸಿದ್ದರಾಮಯ್ಯ ಅವರನ್ನು ತೆಗಳಿರುವುದು ಮತ್ತಷ್ಟು ಕುತೂಹಲಗಳನ್ನು ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ