![HD-Kumaraswamy03](http://kannada.vartamitra.com/wp-content/uploads/2019/06/HD-Kumaraswamy03-1-572x381.jpg)
ಮೈಸೂರು, ಸೆ.24- ಉಪ ಚುನಾವಣೆ ಫಲಿತಾಂಶ ಬಂದ ನಂತರ ಹೊಸ ನಾಟಕ ಪ್ರಾರಂಭವಾಗಲಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಮುಖಂಡ ನಾರಾಯಣಗೌಡ ಅವರು ನಿನ್ನೆ ರಾತ್ರಿ ನಿಧನರಾಗಿದ್ದು , ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಇಂದು ಬೆಳಗ್ಗೆ ಕುಮಾರಸ್ವಾಮಿ ಅವರು ನಗರಕ್ಕೆ ಆಗಮಿಸಿದ್ದರು.
ನಾರಾಯಣಗೌಡರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ಅವರು ತಮ್ಮನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣೆಗೆ ಮೊದಲೇ ಹಲವು ನಾಟಕಗಳು ನಡೆಯುತ್ತಿವೆ. ಇನ್ನು ಫಲಿತಾಂಶ ಬಂದ ನಂತರ ಇನ್ನೂ ಹೊಸ ನಾಟಕಗಳು ಪ್ರಾರಂಭವಾಗಲಿವೆ ಎಂದು ಮಾರ್ಮಿಕವಾಗಿ ನುಡಿದರು.
ಇನ್ನೆರಡು ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದಾಗಿ ಎಚ್ಡಿಕೆ ತಿಳಿಸಿದರು.
ಉಪಚುನಾವಣೆ ನಡೆದೆ ನಡೆಯುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಕಿಲ್ಲ ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಎಚ್ಡಿಕೆ 15 ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ತನ್ನದೇ ಆದ ರಾಜಕೀಯ ತಂತ್ರ ಮಾಡಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಥಳೀಯ ಮುಖಂಡರು ಮತ್ತು ನಾಯಕರಿಗೆ ಆದ್ಯತೆ ನೀಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.