ಬೆಂಗಳೂರು: ಕೆಲ ವಾರಗಳ ಹಿಂದಷ್ಟೇ ಭಾರೀ ಪ್ರವಾಹಕ್ಕೆ ಕಾರಣವಾಗಿದ್ದ ಮಳೆರಾಯ ರಾಜ್ಯದಲ್ಲಿ ಮತ್ತೆ ಭೋರ್ಗರೆಯುವುದು ಮುಂದುವರಿದಿದೆ. ರಾಜ್ಯದ ಹಲವೆಡೆ ನಿನ್ನೆಯಿಂದಲೂ ಎಡಬಿಡದೆ ಮಳೆಯಾಗಿದೆ. ಕೆಲವೆಡೆ ತಡರಾತ್ರಿಯವರೆಗೂ ಮಳೆಯಾದರೆ, ಮತ್ತೆ ಕೆಲವೆಡೆ ರಾತ್ರಿಯಿಡೀ ಮಳೆಯಾಗಿ ಬೆಳಗ್ಗೆಯೂ ಮುಂದುವರಿದಿದೆ. ಬೆಂಗಳೂರು, ಆನೇಕಲ್, ಕೋಲಾರ, ರಾಮನಗರ, ತುಮಕೂರು, ಬಾಗಲಕೋಟೆ, ರಾಯಚೂರು, ಬಳ್ಳಾರಿ, ಯಾದಗಿರಿ ಮೊದಲಾದೆಡೆ ಭರ್ಜರಿ ಮಳೆಯಾಗಿದೆ. ಕೋಲಾರದಲ್ಲಿ ಹಿಕ್ಕಾ ಚಂಡಮಾರುತದ ಹಿನ್ನೆಲೆಯಲ್ಲಿ ಮುಂದಿನ 4 ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಉತ್ತರ ಕರ್ನಾಟಕದ ಕೆಲ ಜಲಾಶಯಗಳು ತುಂಬಿಹೋಗುತ್ತಿದ್ದು, ಪ್ರವಾಹ ಪರಿಸ್ಥಿತಿ ಮತ್ತೆ ಎದುರಾಗುವ ಸಾಧ್ಯತೆ ಇದೆ. ಪ್ರವಾಹದಿಂದ ನಲುಗಿ ಹೋಗಿದ್ದ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮತ್ತೆ ಆತಂಕ ಎದುರಾಗಿದೆ. ಆದರೆ, ಬರದಿಂದ ಕಂಗೆಟ್ಟಿದ್ದ ಕೋಲಾರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ರೈತರ ಮೊಗದಲ್ಲಿ ಸಂತಸ ಮೂಡಿದೆ.
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಮೂರು ದಿನಗಳಿಂದಲೂ ಸುರಿಯುತ್ತಿರುವ ಮಳೆ ನಿನ್ನೆ ರಾತ್ರಿಯಿಡೀ ಮುಂದುವರಿಯಿತು. ಭಾರೀ ಮಳೆ ಗಾಳಿಗೆ ಚನ್ನಪಟ್ಟಣದ ಹುಣಸನಹಳ್ಳಿ ಗ್ರಾಮದ ಜಯಲಕ್ಷ್ಮಮ್ಮ ಎಂಬುವರ ಮನೆಯ ಮೇಲ್ಛಾವಣಿಯೇ ಕುಸಿದುಹೋಯಿತು. ಮನೆಯಲ್ಲಿದ್ದ ಅಗತ್ಯ ವಸ್ತುಗಳಿಗೆ ಹಾನಿಯಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಬರದಿಂದ ಕಂಗೆಟ್ಟಿದ್ದ ತುಮಕೂರಿನಲ್ಲಿ ಮಳೆಯು ರೈತರ ಮೊಗದಲ್ಲಿ ಸಂತಸ ತಂದಿತು. ಅರ್ಧಗಂಟೆ ರಾಚಿದ ಮಳೆಯಿಂದಾಗಿ ಇಲ್ಲಿಯ ಬಿಹೆಚ್ ರಸ್ತೆ, ಅಶೋಕ ರಸ್ತೆ ಮೊದಲಾದ ಪ್ರದೇಶಗಳು ಜಲಾವೃತಗೊಂಡವು.
ರಾಯಚೂರಿನಲ್ಲಿ ಅನೇಕ ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಮಾನ್ವಿ ಪಟ್ಟಣದ ಮುಷ್ಟೂರು ಸೇತುವೆ, ಲಿಂಗಸುಗೂರು ಪಟ್ಟಣದ ಉಪ್ಪಾರ ನಂದಿಹಾಳ ಸೇತುವೆಗಳು ಮುಳುಗಡೆಯಾಗಿವೆ. ರಾಯಚೂರು ನಗರದ ಸಿಯತಲಾಬ್, ಶ್ರೀರಾಮ ಕಾಲೋನಿ ಮೊದಲಾದ ಪ್ರದೇಶಗಳಲ್ಲಿ ಕೆಲ ಅಡಿಯವರೆಗೂ ನೀರು ನಿಂತಿದೆ. ಮಳೆ ಇನ್ನೂ ಮುಂದುವರಿದರೆ ಕೃಷಿ ಭೂಮಿಯಲ್ಲಿರುವ ರೈತರ ಬೆಳೆಗಳು ನಾಶವಾಗುವ ಆತಂಕವಿದೆ.
ಬಳ್ಳಾರಿಯ ಸಿರುಗುಪ್ಪದಲ್ಲಿ ಮಳೆಯ ತೀವ್ರತೆ ಹೆಚ್ಚಿದೆ. ಇಲ್ಲಿಯ ಕರೂರು, ದರೂರು, ಹಾಗಲೂರು ಗ್ರಾಮದ ಹಳ್ಳಗಳು ತುಂಬಿ ಹೋಗಿವೆ. ಇಲ್ಲಿಯ ಸುತ್ತಮುತ್ತಲ ಸಾವಿರಾರು ಎಕರೆ ಭತ್ತ ಪ್ರದೇಶ ಜಲಾವೃತಗೊಂಡಿದೆ. 20 ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಇನ್ನು, ಕೋಲಾರದಲ್ಲಿ ಹಿಕ್ಕಾ ಚಂಡಮಾರುತದ ಪರಿಣಾಮವಾಗಿ 4 ದಿನ ಭಾರೀ ಮಳೆಯಾಗಲಿದೆ ಎಂದು ಕೋಲಾರ ಜಿಲ್ಲಾಡಳಿತ ಎಚ್ಚರಿಸಿದೆ. ಮುಂಜಾಗ್ರತಾ ಕ್ರಮವಾಗಿ ವಿಪತ್ತು ಕಂಟ್ರೋಲ್ ರೂಮನ್ನು ತೆರೆಯಲಾಗಿದೆ.