ಅನರ್ಹತೆ ಆದೇಶ ರದ್ದು ಮಾಡಿ ಅಥವಾ ಉಪಚುನಾವಣೆ ಮುಂದೂಡಿ; ಅನರ್ಹ ಶಾಸಕರ ಪರ ರೋಹ್ಟಗಿ ವಾದ

ನವದೆಹಲಿ: ರಾಜ್ಯದ 17 ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​​ನಲ್ಲಿ ಆರಂಭಗೊಂಡಿದೆ. ಇಂದು ಸುಪ್ರೀಂ ನೀಡುವ ತೀರ್ಪು ಬಹಳ ಮಹತ್ವದ್ದಾಗಿದೆ. ಅಷ್ಟೇ ಅಲ್ಲ, ಅನರ್ಹ ಶಾಸಕರ ಭವಿಷ್ಯವನ್ನು ಇದು ನಿರ್ಧಾರ ಮಾಡಲಿದೆ.

ಕಾಂಗ್ರೆಸ್​-ಜೆಡಿಎಸ್​ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದರು. ಇದಾದ ಬೆನ್ನಲ್ಲೇ ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇದರಿಂದ ವಿಚಲಿತರಾದ ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಅನರ್ಹರ ಪರ ಮುಕುಲ್​ ರೋಹ್ಟಗಿ ವಾದ ಮಂಡಿಸಿದರು. ಈ ವೇಳೆ,  “ಅನರ್ಹರು ರಾಜೀನಾಮೆ ನೀಡಿದ್ದಾರೆ. ಆದರೂ ಅನರ್ಹತೆ ಮಾಡಲಾಗಿದೆ. ಈಗ ಚುನಾವಣೆ ಘೋಷಣೆ ಆಗಿದೆ. ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್ 30 ಕೊನೆಯ ದಿನ. ಈಗಾಗಲೇ ರಾಜೀನಾಮೆ ನೀಡಿ 8 ವಾರ ಆಗಿದೆ. ಹೀಗಾಗಿ ತುರ್ತಾಗಿ ಅರ್ಜಿ ಇತ್ಯರ್ಥಪಡಿಸಿ.

ಚುನಾವಣೆ ಅಧಿಸೂಚನೆಗೆ ತಡೆ ನೀಡಬೇಕು. ಸಾಮಾಜಿಕ ನ್ಯಾಯವನ್ನ ಸ್ಪೀಕರ್ ಅನುಸರಿಸಿಲ್ಲ,” ಎಂದರು ಅವರು. ಮುಂದುವರೆದು,  “ಕೋರ್ಟ್​​ವಿನಾಯಿತಿ ನೀಡಿದ್ದರಿಂದ ಶಾಸಕರು ಸದನಕ್ಕೆ ಹೋಗಲಿಲ್ಲ. ಇದು ವಿಪ್ ಉಲ್ಲಂಘನೆ ಆಗುವುದಿಲ್ಲ. ಸ್ಪೀಕರ್ ನೋಟಿಸ್ ನೀಡದೇ ಅನರ್ಹ ಮಾಡಿದ್ದಾರೆ. ಕನಿಷ್ಠ 7 ದಿನ ಕಾಲಾವಕಾಶ ನೀಡಿ ಶಾಸಕರ ವಾದ ಕೇಳಬೇಕಾಗಿತ್ತು. ರಾಜೀನಾಮೆ ಸ್ವಯಂ ಪ್ರೇರಿತವಾಗಿದ್ದರೆ ಸಾಕು. ಆದರೆ, ಸ್ಪೀಕರ್ ಬೇರೆ ಕಾರಣ ನೀಡಿ ಅನರ್ಹಗೊಳಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಅನರ್ಹರಿಗೆ ಅವಕಾಶ ಕೊಡಿ. ಯಾರ ಸ್ಪರ್ಧೆಗೂ ಅವಕಾಶ ನಿರಾಕರಿಸುವಂತಿಲ್ಲ,” ಎಂದು ನ್ಯಾಯಾಧೀಶರ ಎದುರು ಮುಕುಲ್​ ರೋಹ್ಟಗಿ ಮನವಿ ಮಾಡಿದರು.

ಅನರ್ಹರ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸುವುದು ಬೇಡ ಎಂದು ಕೋರಿದ ಅವರು, “ಅಪರೂಪದ ಪ್ರಕರಣಗಳಲ್ಲಿ ಚುನಾವಣೆಗೆ ತಡೆ ನೀಡಲಾಗಿದೆ. 2015ರಲ್ಲಿ ಹೈದರಾಬಾದ್ ​ಹೈಕೋರ್ಟ್ ಕೂಡ ತಡೆ ನೀಡಿತ್ತು. ಹೀಗಾಗಿ 15 ಕ್ಷೇತ್ರಗಳ ಬೈ ಎಲೆಕ್ಷನ್​ಗೆ ತಡೆ ನೀಡಿ. 361/b ಪ್ರಕಾರ ಅನರ್ಹರು ಲಾಭದಾಯಕ ಹುದ್ದೆ ಹೊಂದುವಂತಿಲ್ಲ. 361/bಯಲ್ಲಿ ಮರು ಆಯ್ಕೆ ವಿಷಯದ ಬಗ್ಗೆ ಉಲ್ಲೇಖ ಇಲ್ಲ. ರಾಜೀನಾಮೆ ನಂತರ ಪಕ್ಷ ಬದಲಾವಣೆಗೂ ಅಭ್ಯಂತರವಿಲ್ಲ. 361/b ವಿಧಿಯಲ್ಲಿ ಪಕ್ಷಾಂತರದ ಬಗ್ಗೆ ಉಲ್ಲೇಖವಿಲ್ಲ,” ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

“ಸುಪ್ರೀಂಕೋರ್ಟ್ ಕೂಡ ಮೊದಲು ರಾಜೀನಾಮೆ ಅಂಗಿಕಾರಕ್ಕೆ ಸೂಚಿಸಿತ್ತು, ಸ್ಪೀಕರ್ 2023ರವರೆಗೆ ಸ್ಪರ್ಧಿಸುವಂತಿಲ್ಲ ಎಂದಿರುವುದರಿಂದ ಚುನಾವಣೆಗೆ ತಡೆ ಕೇಳುತ್ತಿದ್ದೇನೆ. ಅನರ್ಹಗೊಳಿಸಿದ್ದನ್ನು ಕೋರ್ಟ್ ನಲ್ಲಿ ಪ್ರಶ್ನಿಸಿರುವ‌ ಅರ್ಜಿ ಬಾಕಿ ಇದೆ. ಈ ಮಧ್ಯೆಯೇ ಚುನಾವಣೆ ಘೋಷಣೆ‌ ಆಗಿದೆ. ಸ್ಪರ್ಧೆಯಿಂದ ಅನರ್ಹರು ವಂಚಿತಗೊಳ್ಳಬಾರದು. ಹಾಗಾಗಿ ಚುನಾವಣೆಗೆ ತಡೆ‌ ನೀಡಿ,” ಎಂದು ರೋಹ್ಟಗಿ ಹೇಳಿದರು.

ಸುಪ್ರೀಂ ಕೋರ್ಟ್​​ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇದೆ. ಸ್ಪೀಕರ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಒಂದು ತಿಂಗಳಾದರೂ ಪ್ರಕರಣ ವಿಚಾರಣೆಗೆ ಬಂದಿರಲ್ಲ. ಇದು ಅನರ್ಹರನ್ನು ಆತಂಕಕ್ಕೆ ಈಡು ಮಾಡಿತ್ತು. ಇಂದಾದರೂ ಸುಪ್ರಿಂನಲ್ಲಿ ತೀರ್ಪು ಬರುವ ನಿರೀಕ್ಷೆಯಲ್ಲಿ ಅನರ್ಹರಿದ್ದಾರೆ.

ಅನರ್ಹ ಶಾಸಕರ ಪ್ರಕರಣದ ವಿಚಾರಣೆಯನ್ನು ನ್ಯಾ| ಮೋಹನ್ ಶಾಂತನಗೌಡರ ನಡೆಸಬೇಕಿತ್ತು. ಆದರೆ, ಅವರು ಕರ್ನಾಟಕ ಮೂಲದವರು ಮತ್ತು ಅನರ್ಹ ಶಾಸಕ ಬಿಸಿ ಪಾಟೀಲ್​ ಅವರ ದೂರದ ಸಂಬಂಧಿ. ಹೀಗಾಗಿ ಸ್ವಇಚ್ಛೆಯಿಂದ ಅವರು ವಿಚಾರಣೆಯಿಂದಲೇ ಹಿಂದೆ ಸರಿದಿದ್ದರು. ಹೀಗಾಗಿ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಕೃಷ್ಣ ಮುರಳಿ, ಸಂಜಯ್ ಖನ್ನಾ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ