ಸುಲಿಗೆ ಆಪಾದನೆ: ಚಿನ್ಮಯಾನಂದ ಮೇಲೆ ರೇಪ್ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿನಿ ಬಂಧನ

ನವದೆಹಲಿ: ಬಿಜೆಪಿ ನಾಯಕ ಚಿನ್ಮಯಾನಂದ ಸ್ವಾಮಿ ಮೇಲೆ ಅತ್ಯಾಚಾರ ಆರೋಪ ಮಾಡಿರುವ ಶಹಜಾನ್ಪುರದ ಕಾನೂನು ವಿದ್ಯಾರ್ಥಿಯನ್ನು ಸುಲಿಗೆ ಆರೋಪದ ಮೇಲೆ ಎಸ್ಐಟಿ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಅಲಹಾಬಾದ್​ ಹೈಕೋರ್ಟ್​​ನ ವಿಭಾಗಿಯ ಪೀಠವು ಆಕೆಗೆ ಜಾಮೀನು ನಿರಾಕರಿಸಿದ ಎರಡು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ವಿದ್ಯಾರ್ಥಿಯನ್ನು ಪೊಲೀಸರು ಕರೆದೊಯ್ಯುವ ವೇಳೆ ಆಕೆಯ ಸಹೋದರ ಮತ್ತು ತಂದೆ ಹಾಜರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲು ಎಸ್​ಐಟಿ ಮಂಗಳವಾರ ಮತ್ತಿಬ್ಬರು ಆರೋಪಿಗಳಾದ ಸಚಿನ್ ಮತ್ತು ವಿಕ್ರಂ ಅವರನ್ನು ವಶಕ್ಕೆ ಪಡೆದಿತ್ತು.

ಎಸ್​ಐಟಿ ಇದಕ್ಕೂ ಮುನ್ನ ಸಂತ್ರಸ್ತ ಯುವತಿಯ ಮೂವರು ಸ್ನೇಹಿತರನ್ನು  ಅತ್ಯಾಚಾರ ಘಟನೆಗೆ ಸಂಬಂಧಿಸಿದ ವಿಡಿಯೋ ಕ್ಲಿಪ್​ಗಳ ಬಗ್ಗೆ ವಿಚಾರಣೆ ನಡೆಸಲು ಪ್ರಕರಣ ದಾಖಲಿಸಿದೆ. ಕಾನೂನು ವಿದ್ಯಾರ್ಥಿನಿ ಆರೋಪಗಳನ್ನು ನಿರಾಕರಿಸಿದರೂ ಈ ಪ್ರಕರಣದಲ್ಲಿ ತಮ್ಮ ಪಾತ್ರ ಇರುವುದಾಗಿ ಮೂವರು ಒಪ್ಪಿಕೊಂಡಿದ್ದಾರೆ. ಇವರ ಮೇಲೆ ಐಪಿಸಿ ಸೆಕ್ಷನ್​ 506, 201, 385, 35 ಹಾಗೂ 67ರ ಅಡಿ ಪ್ರಕರಣಗಳನ್ನು ದಾಖಲಿಸಿ, ಬಂಧಿಸಲಾಗಿದೆ ಎಂದು ಎಸ್​ಐಟಿ ಮುಖ್ಯಸ್ಥ ನವೀನ್ ಅರೋರಾ ತಿಳಿಸಿದ್ದಾರೆ.
ಚಿನ್ಮಯಾನಂದರಿಂದ ತಪ್ಪಿಸಿಕೊಳ್ಳಲು ನನಗೆ ಸಹಾಯ ಮಾಡಿದವರು ನನ್ನನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸುಲಿಗೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅತ್ಯಾಚಾರ ಪ್ರಕರಣವನ್ನು ದುರ್ಬಲಗೊಳಿಸಲು ಈ  ನಾಟಕ ಮಾಡುತ್ತಿದ್ದಾರೆ ಎಂದು ನನಗನಿಸುತ್ತದೆ ಎಂದು ಸಂತ್ರಸ್ತ ಕಾನೂನು ವಿದ್ಯಾರ್ಥಿನಿ ಹೇಳಿದ್ದಾರೆ.
ಇನ್ನು, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ನಾಯಕ ಚಿನ್ಮಯಾನಂದ ಅವರ ಜಾಮೀನು ಅರ್ಜಿಯನ್ನು ಉತ್ತರ ಪ್ರದೇಶ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ. ಶುಕ್ರವಾರ ನಡೆದ ವಿಚಾರಣೆ ವೇಳೆ ಅವರು ಕಾನೂನು ವಿದ್ಯಾರ್ಥಿನಿ ಮಾಡಿರುವ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ