ಉಪಚುನಾವಣೆ ಅಖಾಡದಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ; ಬಿಜೆಪಿಗೆ ತಲೆನೋವಾಯ್ತು ಪಕ್ಷದೊಳಗಿನ ಬಂಡಾಯ

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ತಿಂಗಳು ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್​-ಜೆಡಿಎಸ್​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅನರ್ಹಗೊಂಡಿದ್ದ 17 ಶಾಸಕರಿಂದ ತೆರವಾದ ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆ ನಡೆದಿದೆ. ಈಗಾಗಲೇ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾಗಿದೆ. ಇದೇ ತಿಂಗಳ 30ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಉಪಚುನಾವಣಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೆ ಸಾಕಪ್ಪ ಎಂದು ಅನರ್ಹ ಶಾಸಕರು ಸುಪ್ರೀಂಕೋರ್ಟ್​ ತೀರ್ಪನ್ನು ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ಆ ಕ್ಷೇತ್ರಗಳಲ್ಲಿ ತಾವು ಕಣಕ್ಕಿಳಿಯಲು ಬಿಜೆಪಿ ನಾಯಕರು ಪೈಪೋಟಿ ನಡೆಸಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವ ಭರವಸೆ ನೀಡಿದ ಕಾರಣಕ್ಕೆ ಅನೇಕ ಶಾಸಕರು ಕಾಂಗ್ರೆಸ್​-ಜೆಡಿಎಸ್​ಗೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಬೀಳಿಸಲು ಕಾರಣರಾಗಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮುಖ್ಯ ಕಾರಣವಾಗಿರುವ ಅನರ್ಹ ಶಾಸಕರನ್ನು ನಡುನೀರಿನಲ್ಲಿ ಕೈಬಿಡಲಾರದೆ ಅಸಹಾಯಕ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರಿದ್ದಾರೆ. ಆದರೆ, ಇದರ ನಡುವೆ ಬಿಜೆಪಿಯಲ್ಲೂ ಬಂಡಾಯ ತಲೆದೋರುತ್ತಿದ್ದು, ಉಪಚುನಾವಣಾ ಕ್ಷೇತ್ರಗಳಲ್ಲಿ ಅನರ್ಹ ಶಾಸಕರ ಬದಲು ತಾವೇ ಕಣಕ್ಕಿಳಿಯಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. 15 ಕ್ಷೇತ್ರಗಳಲ್ಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ರಾಜ್ಯ ಸರ್ಕಾರದ ನಾಯಕರಿಗೆ ತಲೆನೋವು ತಂದಿಟ್ಟಿದೆ.

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ನೆ.ಲ. ನರೇಂದ್ರ ಬಾಬು,  ಎಸ್. ಹರೀಶ್, ಎಂ.ಎನ್. ನಾಗರಾಜ್, ಯಶವಂತಪುರ ಕ್ಷೇತ್ರದಲ್ಲಿ ನಟ ಜಗ್ಗೇಶ್, ಕೆ.ಆರ್. ಪುರಂನಲ್ಲಿ ನಂದೀಶ್ ರೆಡ್ಡಿ, ಶಿವಾಜಿನಗರದಲ್ಲಿ ನಿರ್ಮಲ್ ಕುಮಾರ್ ಸುರಾನ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ಗೋಕಾಕ್​ನಲ್ಲಿ ಅಶೋಕ್ ಪೂಜಾರಿ, ಕಾಗವಾಡ ಕ್ಷೇತ್ರದಲ್ಲಿ ರಾಜು ಕಾಗೆ, ಹಿರೇಕೆರೂರು ಕ್ಷೇತ್ರದಲ್ಲಿ ಯು.ಬಿ. ಬಣಕಾರ್, ಯಲ್ಲಾಪುರ ಕ್ಷೇತ್ರದಲ್ಲಿ ವಿ.ಎಸ್. ಪಾಟೀಲ್, ವಿಜಯನಗರದಲ್ಲಿ ಗವಿಯಪ್ಪ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅನರ್ಹ ಶಾಸಕರ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಪಕ್ಷದೊಳಗೆ ಬಂಡಾಯವೇಳುವ ಭೀತಿಯಲ್ಲಿ ಬಿಜೆಪಿ ನಾಯಕರಿದ್ದಾರೆ.

ಯಶವಂತಪುರ ಕ್ಷೇತ್ರದಿಂದ ತಾವು ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿರುವ ಬಗ್ಗೆ ಟ್ವಿಟ್ಟರ್​ನಲ್ಲೇ ನಟ ಜಗ್ಗೇಶ್ ಹೇಳಿಕೊಂಡಿದ್ದರು. ‘ಕೊನೆ ಗಳಿಗೆಯ ಅಭ್ಯರ್ಥಿಯಾಗಿದ್ದ ನಾನು ಕೇವಲ 9 ದಿನಗಳಲ್ಲಿ 60,400 ಮತಗಳನ್ನು ಪಡೆದುಕೊಂಡಿದ್ದೆ. ಈಗ ಉಪಚುನಾವಣೆಯಲ್ಲಿ ಮೌನವಾಗಿರಲೋ ಅಥವಾ ಬೇರೆ ಪಕ್ಷದಿಂದ ವಲಸೆ ಬಂದವರಿಗಾಗಿ ಪಕ್ಕಕ್ಕೆ ಸರಿಯಲೋ? ಬೇರೆಯವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ತ್ಯಾಗಿಯಾಗಲೋ?’ ಎಂದು ಟ್ವೀಟ್ ಮಾಡಿ ಪಿಎಂ ನರೇಂದ್ರ ಮೋದಿ, ಕರ್ನಾಟಕ ಬಿಜೆಪಿ, ಬಿ.ಎಲ್. ಸಂತೋಷ, ಆರ್​ಎಸ್​ಎಸ್​ಗೆ ಟ್ಯಾಗ್​ ಕೂಡ ಮಾಡಿದ್ದರು.

ಜಗ್ಗೇಶ್ ಅವರ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ನೀವು ಕೂಡ ಬೇರೊಂದು ಪಕ್ಷದಿಂದ ಬಿಜೆಪಿಗೆ ಬಂದ ವಲಸಿಗರು ಎಂಬುದನ್ನು ಮರೆಯಬೇಡಿ. ವಲಸಿಗರಲ್ಲೂ ನಿಮ್ಮ ಸಿನಿಮಾ ಲೋಕದ ಆತ್ಮೀಯರಿದ್ದಾರೆ ಎಂದು ಮರೆತಿರಾ? ನೀವು ಚುನಾವಣೆಗೆ ನಿಲ್ಲಬೇಡಿ. ಆಪರೇಷನ್ ಕಮಲ ಮೂಲಕ ನೀವೇ ಹುಟ್ಟಿಸಿದ ಮಕ್ಕಳಿಗೆ ಆ ಸ್ಥಾನವನ್ನು ಬಿಟ್ಟುಕೊಡಿ. ನಮಗೆ ರಾಜಕಾರಣಿ ಜಗ್ಗೇಶ್​ಗಿಂತ ನವರಸನಾಯಕ ಜಗ್ಗೇಶ್ ಎಂದರೆ ತುಂಬ ಇಷ್ಟ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ