ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ಸುಪ್ರೀಂ; ರೆಬೆಲ್​ಗಳಿಗಿಲ್ಲ ರಿಲೀಫ್​!

ನವದೆಹಲಿ: ಕಾಂಗ್ರೆಸ್ಮತ್ತು ಜೆಡಿಎಸ್ಗೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಮುಂದಿನ ತಿಂಗಳು ಉಪ ಚುನಾವಣೆ ನಡೆಯಲಿದೆ. ಇದರಿಂದ ಅನರ್ಹ ಶಾಸಕರ ಚಡಪಡಿಕೆ ಇನ್ನಷ್ಟು ಹೆಚ್ಚಾಗಿದೆ. 17 ಶಾಸಕರು ತಮ್ಮನ್ನು ಅನರ್ಹಗೊಳಿಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಮೆಟ್ಟಿಲೇರಿದ್ದರು. ಕುರಿತ ವಿಚಾರಣೆ ಇದೀಗ ನ್ಯಾಯಮೂರ್ತಿ ಎನ್ವಿ ರಮಣ ಒಳಗೊಂಡ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ

2 ದಿನಗಳ ಹಿಂದೆಯೇ ನವದೆಹಲಿಗೆ ತೆರಳಿರುವ ಎಲ್ಲಾ 17 ಅನರ್ಹ ಶಾಸಕರು ತಮ್ಮ ಪರ ವಕೀಲ ಮುಕುಲ್ ರೋಹ್ಟಗಿ ಜೊತೆ ಚರ್ಚೆ ನಡೆಸಿದ್ದರು. ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆ. 30 ಕೊನೆಯ ದಿನವಾಗಿರುವುದರಿಂದ ಅನರ್ಹ ಶಾಸಕರಿಗೆ ಆತಂಕ ಶುರುವಾಗಿದೆ. ಹೀಗಾಗಿ, ಈ ಪ್ರಕರಣ ಇತ್ಯರ್ಥವಾಗುವವರೆಗೂ ಚುನಾವಣೆಗೆ ತಡೆ ನೀಡುವಂತೆ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಅನರ್ಹ ಶಾಸಕರು ಅರ್ಜಿ ಮನವಿ ಮಾಡಿದ್ದಾರೆ.

ಪಕ್ಷಾಂತರ ಕಾಯ್ದೆಯಡಿ 17 ಶಾಸಕರನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಶಾಸಕರ ಅರ್ಜಿ ವಿಚಾರಣೆಯನ್ನು ನ್ಯಾ. ಎನ್​.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಕೈಗೆತ್ತಿಕೊಂಡಿತ್ತು. ಇನ್ನೂ ಆ ಅರ್ಜಿಯ ಅಂತಿಮ ಆದೇಶ ಹೊರಬಿದ್ದಿಲ್ಲ. ಹೀಗಾಗಿ, ಈ ಬಾರಿಯ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ಕುತೂಹಲ ಹಾಗೇ ಉಳಿದುಕೊಂಡಿದೆ. ಒಂದುವೇಳೆ ಅರ್ಜಿಯ ಆದೇಶ ಹೊರಬೀಳುವುದು ತಡವಾದರೂ ಅನರ್ಹ ಶಾಸಕರಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ. ಒಂದುವೇಳೆ ನ್ಯಾಯಮೂರ್ತಿಗಳು ಅನರ್ಹರ ಶಾಸಕರ ಪರವಾಗಿ ತೀರ್ಪು ನೀಡದಿದ್ದರೂ ಈ ಬಾರಿಯ ಚುನಾವಣೆಯಲ್ಲಿ 17 ಶಾಸಕರಿಗೆ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ.

ಸುಪ್ರೀಂ ಕೋರ್ಟ್​ನಲ್ಲಿ  ಇಂದು ಅನರ್ಹ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್​ ರೋಹ್ಟಗಿ “ಚುನಾವಣಾ ಆಯೋಗದಿಂದ ಮರು ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅನರ್ಹ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ, ಬದಲಿಗೆ ಅವರನ್ನು ಅನರ್ಹಗೊಳಿಸಲಾಗಿದೆ. ಅನರ್ಹರ ವಿಚಾರದಲ್ಲಿ ನ್ಯಾಚುರಲ್​ ಜಸ್ಟೀಸ್​ ಫಾಲೋ ಆಗಿಲ್ಲ. ಕನಿಷ್ಟ 7 ದಿನ ಅವಕಾಶ ನೀಡಿ ಶಾಸಕರ ವಾದ ಕೇಳಬೇಕಿತ್ತು. ಆದರೆ, 3 ದಿನ ಮಾತ್ರ ಮಾತ್ರ ಅವಕಾಶ ನೀಡಲಾಗಿತ್ತು.

ಸುಪ್ರೀಂ ಕೋರ್ಟ್​ ವಿನಾಯಿತಿ ಇದ್ದುದರಿಂದ ಶಾಸಕರು ಸದನಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಸದನಕ್ಕೆ ಗೈರಾಗಿದ್ದು ವಿಪ್ ಉಲ್ಲಂಘಟನೆ ಹೇಗಾಗುತ್ತದೆ? ಎಂದು ಗಂಭೀರ ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ, ರಾಜೀನಾಮೆ ಸ್ವಯಂ ಪ್ರೇರಿತವಾಗಿದ್ದರೆ ಸಾಕು. ಅನರ್ಹರ ಪಕ್ಷ ವಿರೋಧಿ ಚಟುವಟಿಕೆಗಳಿಗೆ ಸಾಕ್ಷಿ ಇಲ್ಲ. ಆದರೆ, ಸ್ಪೀಕರ್ ಕಾನೂನು  ಬಾಹೀರವಾಗಿ ಬೇರೆ ಕಾರಣ ನೀಡಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಹೀಗಾಗಿ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಿ ಸೆಪ್ಟೆಂಬರ್​.30 ಕಡೆಯ ದಿನವಾಗಿರುವುದರಿಂದ ಹೆಚ್ಚು ಸಮಯ ಇಲ್ಲ” ಎಂದು ಮನವಿ ಮಾಡಿದ್ದಾರೆ.

ನ್ಯಾಯಾಲಯದಲ್ಲಿ 361/b ವಿಧಿಯ ಕುರಿತು ಉಲ್ಲೇಖಿಸಿರುವ ಮುಕುಲ್ ರೋಹ್ಟಗಿ, ಈ ವಿಧಿಯಲ್ಲಿ ಪಕ್ಷಾಂತರದ ಕುರಿತು ಉಲ್ಲೇಖವಿಲ್ಲ. ಆದರೆ, ಅನರ್ಹರಾದವರು ಅವಧಿ ಮುಗಿಯುವವರೆಗೆ ಲಾಭದಾಯಕ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ ಎಂದಷ್ಟೇ ಹೇಳಲಾಗಿದೆ. ಹೀಗಾಗಿ ಈ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಇಲ್ಲವೆ, 2015ರಲ್ಲಿ ಹೈದ್ರಾಬಾದ್​ ಹೈಕೋರ್ಟ್​ ಉಪ ಚುನಾವಣೆಗೆ ತಡೆ ನೀಡಿದಂತೆ ಇಂದು ಸುಪ್ರೀಂ ಕೋರ್ಟ್​ ಸಹ ಚುನಾವಣೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಆದರೆ, ಕೆಪಿಸಿಸಿ ಪರ ಪ್ರತಿವಾದ ಮಂಡಿಸಿದ ಮತ್ತೋರ್ವ ಹಿರಿಯ ವಕೀಲ ಕಪಿಲ್ ಸಿಬಲ್, “ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಬಾರದು. ನೀವು ಭಾಗೀದಾರರಲ್ಲ ಹೀಗಾಗಿ ಅನರ್ಹರ ಕುರಿತು ಅಭಿಪ್ರಾಯ ನೀಡಬಾರದು ಎಂದು ತಾಕೀತು ಮಾಡಿದ್ದಾರೆ. ಅಲ್ಲದೆ, ಈ ಕುರಿತು ವಿಸ್ಕೃತ ಚರ್ಚೆಯ ಅಗತ್ಯವಿದ್ದು,  ಈ ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಬೇಕು ಎಂದು ಸುಪ್ರೀಂ ಕೋರ್ಟ್​ ಎದುರು ಮನವಿ ಮಾಡಿದ್ದಾರೆ. ಪರಿಣಾಮ ಕೋರ್ಟ್​ ಅನರ್ಹರ ಕುರಿತ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಹೀಗಾಗಿ ಅನರ್ಹರಿಗೆ ಸದ್ಯಕ್ಕಂತು ರಿಲೀಫ್ ಸಿಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ