ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣಾ ಅಖಾಡ ಸಜ್ಜುಗೊಂಡಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಸಿದ್ಧತೆ ಮಾಡಿಕೊಳ್ಳಲಾರಂಭಿಸಿವೆ. ನಾಮಪತ್ರ ಸಲ್ಲಿಸಲು ಕೇವಲ 6 ದಿನ ಬಾಕಿ ಇರುವುದರಿಂದ ಟಿಕೆಟ್ ಆಕಾಂಕ್ಷಿಗಳು ನಾಯಕರ ಎದುರು ತಮ್ಮ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ.
ಹೊಸಕೋಟೆಯಿಂದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೂ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್ ವಿರುದ್ಧ ಬಿಜೆಪಿಯಿಂದ ನಿಂತಿದ್ದ ಶರತ್ ಬಚ್ಚೇಗೌಡ ಕೇವಲ 5 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಕೊನೆಯ ಹಂತದವರೆಗೂ ಶರತ್ ಬಚ್ಚೇಗೌಡ ಗೆಲ್ಲುತ್ತಾರೆಂದೇ ಭಾವಿಸಲಾಗಿತ್ತು. ಆದರೆ, ಕೊನೆಗೂ ಎಂಟಿಬಿ ನಾಗರಾಜ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದರು.
ಕಳೆದ ಬಾರಿ ಕಾಂಗ್ರೆಸ್ಗೆ ತೀವ್ರ ಪೈಪೋಟಿ ನೀಡಿದ್ದ ಶರತ್ ಬಚ್ಚೇಗೌಡ ಈ ಬಾರಿಯ ಉಪಚುನಾವಣೆಯಲ್ಲಿ ತನಗೇ ಟಿಕೆಟ್ ನೀಡಬೇಕೆಂದು ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಲಾಬಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಎಂಟಿಬಿ ನಾಗರಾಜ್ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಬ್ಬರೂ ತಮ್ಮ ಮೇಲೆ ಒತ್ತಡ ಹೇರುತ್ತಿರುವುದರಿಂದ ಬಿಎಸ್ವೈಗೆ ಹೊಸಕೋಟೆ ವಿಧಾನಸಭಾ ಕ್ಷೇತ್ರ ತಲೆನೋವಾಗಿ ಪರಿಣಮಿಸಿದೆ.
ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪನವರನ್ನು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಭೇಟಿ ಮಾಡಿದ ಎಂಟಿಬಿ ನಾಗರಾಜ್ ನಾಳೆಯ ಅರ್ಜಿ ವಿಚಾರಣೆ ಹಾಗೂ ಉಪ ಚುನಾವಣೆ ಟಿಕೇಟ್ ಕುರಿತು ಚರ್ಚೆ ನಡೆಸಿದ್ದಾರೆ. ಒಂದು ವೇಳೆ ತೀರ್ಪು ತಮ್ಮ ಪರವಾಗಿ ಬಂದರೆ ತನಗೆ ಟಿಕೆಟ್ ನೀಡಬೇಕು, ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ನೀಡದಿದ್ದರೆ ತಾನು ಸೂಚಿಸಿದ ವ್ಯಕ್ತಿಗೆ ಟಿಕೇಟ್ ಕೊಡಬೇಕು ಎಂದು ಎಂಟಿಬಿ ಬೇಡಿಕೆಯಿಟ್ಟಿದ್ದಾರೆ.
ಹೊಸಕೋಟೆ ಉಪಚುನಾವಣಾ ವಿಚಾರದಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿ ಹೇಳಿದ ಮಾತನ್ನು ನೀವು ಕೇಳಬಾರದು. ನಾನು ನಿಮಗೆ ಸಹಕಾರ ಕೊಟ್ಟಿದ್ದೇನೆ, ಅದಕ್ಕೆ ಪ್ರತಿಯಾಗಿ ನಿಮ್ಮ ಸಹಕಾರ ನನಗೆ ಬೇಕು. ಸರ್ಕಾರ ರಚನೆಗೂ ಮೊದಲು ಏನು ಭರವಸೆ ಕೊಟ್ಟಿದ್ದೀರೋ ಅದನ್ನು ಈಡೇರಿಸಿ ಎಂದು ಸಿಎಂ ಬಿಎಸ್ವೈ ಬಳಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಮತ್ತೊಂದು ಕಡೆ ಶರತ್ ಬಚ್ಚೇಗೌಡರಿಂದಲೂ ಭಾರೀ ಲಾಬಿ ನಡೆಯುತ್ತಿದ್ದು, ಬಿಜೆಪಿ ಸಂಸದರಾಗಿರುವ ಬಚ್ಚೇಗೌಡರು ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಒಂದುವೇಳೆ ತಮ್ಮ ಮಗನಿಗೆ ಟಿಕೆಟ್ ನೀಡದಿದ್ದರೆ ಆತ ಪಕ್ಷೇತರನಾಗಿ ಸ್ಪರ್ಧಿಸಲಿದ್ದಾನೆ. ಆತನ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಮಗ ಒಪ್ಪುತ್ತಿಲ್ಲ. ಹೀಗಾಗಿ, ಆತನಿಗೆ ಟಿಕೆಟ್ ನೀಡದೆ ಇದ್ದರೆ ಬಿಜೆಪಿಗೆ ಬರುವ ಮತಗಳು ವಿಭಜನೆಯಾಗುತ್ತದೆ. ಪಕ್ಷೇತರನಾಗಿ ಶರತ್ ಸ್ಪರ್ಧಿಸಿದರೆ ಅದಕ್ಕೆ ತಾನು ಹೊಣೆಯಲ್ಲ ಎಂದು ಸಂಸದ ಬಚ್ಚೇಗೌಡ ಸಿಎಂ ಯಡಿಯೂರಪ್ಪ ಬಳಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಬಾರಿಯ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಶರತ್ ಬಚ್ಚೇಗೌಡ ಪರವಾಗಿ ಅವರ ಬೆಂಬಲಿಗರಿಂದಲೂ ರಾಜ್ಯ ಸರ್ಕಾರದ ನಾಯಕರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಎಂಟಿಬಿ ನಾಗರಾಜ್ ಬಿಜೆಪಿಯಿಂದ ಸ್ಪರ್ಧಿಸಿದರೆ ಅವರ ವಿರುದ್ಧ ಕಾಂಗ್ರೆಸ್ನಿಂದ ಶರತ್ ಬಚ್ಚೇಗೌಡರನ್ನು ನಿಲ್ಲಿಸಲು ತಂತ್ರ ರೂಪಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅಪ್ಪ ಬಿಜೆಪಿ ಸಂಸದರಾಗಿರುವುದರಿಂದ ಶರತ್ ಕಾಂಗ್ರೆಸ್ಗೆ ಸೇರ್ಪಡೆಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಕಡಿಮೆ ಎಂದು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕಿದ್ದರು. ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವ ಎಚ್ಚರಿಕೆ ನೀಡಿರುವ ಶರತ್ ಬಚ್ಚೇಗೌಡ ಹಾಗೂ ಅವರ ಬೆಂಬಲಿಗರ ಒತ್ತಡದಿಂದ ಸಿಎಂ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.