ಹ್ಯೂಸ್ಟನ್: ಉಗ್ರರಿಗೆ ಪೋಷಣೆ ನೀಡುತ್ತಿರುವುದು ಯಾರೆಂಬುದು ಇಡೀ ವಿಶ್ವಕ್ಕೇ ಗೊತ್ತಿದೆ. 9/11 ಹಾಗೂ 26/11 ದಾಳಿಯ ಮೂಲಕ ಕೆದಕಿದರೆ, ಅವರು ಯಾರೆಂದು ತಿಳಿಯುತ್ತದೆ ಎಂದು ಹ್ಯೂಸ್ಟನ್’ನಲ್ಲಿ ಭಾನುವಾದ ನಡೆದ ಹೌಡಿ ಮೋದಿ ಸಮಾವೇಶದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರೇ ಪಾಕಿಸ್ತಾನಕ್ಕೆ ಚಾಟಿ ಬೀಸಿದರು.
ಎನ್ಆರ್’ಜಿ ಕ್ರೀಡಾಂಗಣದಲ್ಲಿ ಅನಿವಾಸಿ ಭಾರತೀಯ 600 ಸಂಘಟನೆಗಳು ಆಯೋಜಿಸಿದ್ದ ಸಮಾವೇಶದಲ್ಲಿ ಸುಮಾರು 50ಸಾವಿರ ಮಂದಿ ನೆರೆದಿದ್ದರು. ವಿದೇಶಿ ಚುನಾಯಿತ ಪ್ರತಿನಿಧಿಯೊಬ್ಬರಿಗೆ ಅಮೆರಿಕಾದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದು, ಇದೇ ಮೊದಲು. ಮೋದಿಯವರು ವೇದಿಕೆ ಮೇಲೆ ಬರುತ್ತಿದ್ದಂತೆ ಶಿರಬಾಗಿ ನಮಿಸಿ, ಕೈಬೀಸುತ್ತಿದ್ದಂತೆ ಭಾರತೀಯರು ಹುಚ್ಚೆದ್ದು ಕುಣಿದರು.
ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿ ಹುರಿದುಂಬಿಸಿದರು. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತ-ಅಮೆರಿಕಾ ಬಾಂಧವ್ಯ ಹಾಗೂ ಹಲವು ರಾಜತಾಂತ್ರಿಕ ವಿಚಾರಗಳ ಬಗ್ಗೆ 20 ನಿಮಿಷಕ್ಕೂ ಅಧಿಕ ಕಾಲ ಮಾತನಾಡಿದರು. ನಂತರ 45 ನಿಮಿಷಗಳ ಸುದೀರ್ಘ ಮೋದಿ ಭಾಷಣಕ್ಕೆ ಪ್ರೇಕ್ಷಕಗಣದಲ್ಲಿ ಒಬ್ಬರಾಗಿದ್ದರು. ಉಭಯ ನಾಯಕರು ಭಾರತ-ಅಮೆರಿಕಾ ಬಾಂಧವ್ಯವೃದ್ದಿಯನ್ನು ಸಾರಿ ಹೇಳಿದರು.
45 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದ ಮೋದಿಯವರು, ಟ್ರಂಪ್ ಎದುರೇ ಪಾಕಿಸ್ತಾನಕ್ಕೆ ಚಾಟಿ ಬೀಸಿದರು.
ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದ ಕ್ರಮವನ್ನು ಮೋದಿಯವರು ಇದೇ ವೇಳೆ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರ ಮುಂದೆ ಸಮರ್ಥಿಸಿಕೊಂಡರು. 370ನೇ ವಿಧಿ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಜನರನ್ನು ವಿಕಾಸ ಮತ್ತು ಸಮಾನ ಅಧಿಕಾರದಿಂದ ವಂಚಿತರನ್ನಾಗಿಸಿತ್ತು. ಇದರಿಂದ ಈ ಭಾಗದಲ್ಲಿ ಭಯೋತ್ಪಾದಕರ ಮೈಲುಗೈ ಆಗಿತ್ತು. ವಿಧಿಯ ರದ್ದತಿಯಿಂದ ಇದೀಗ ಅಲ್ಲಿನ ಜನತೆಗೆ ಅವಕಾಶ ತೆರೆದುಕೊಂಡಿವೆ. ಅಲ್ಲದೆ, ಮಹಿಳೆಯರು, ಮಕ್ಕಳು ಹಾಗೂ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳು ಅಂತ್ಯಗೊಳ್ಳಲಿದೆ ಎಂದು ಹೇಳಿದರು.
ಇದೇ ವೇಳೆ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಮೋದಿಯವರು, 370ನೇ ವಿಧಿ ರದ್ಧು ಮಾಡಿದ ಭಾರತದ ಕ್ರಮದಿಂದ ಕೆಲವರಿಗೆ ತೊಂದರೆಯಾಗಿದೆ. ತಮ್ಮ ದೇಶವನ್ನೇ ಸರಿಯಾಗಿ ನಿಭಾಯಿಸಲು ಸಾಧ್ಯವಾಗದವರು, ಭಾರತವನ್ನು ದ್ವೇಷಿಸುವುದನ್ನೇ ರಾಜನೀತಿ ಮಾಡಿಕೊಂಡಿದ್ದಾರೆ. ಅವರು ಭಯೋತ್ಪಾದನೆಯನ್ನು ಪೋಷಿಸಿ, ಬೆಳೆಸುತ್ತಾ ಇಡೀ ವಿಶ್ವಕ್ಕೇ ಕಂಟಕವಾಗಿದ್ದಾರೆ. ಅವರು ಯಾರು ಎಂಬುದು ಇಡೀ ವಿಶ್ವಕ್ಕೇ ಗೊತ್ತಿದೆ.
ಅಮೆರಿಕಾದಲ್ಲಿ 9/11 ಮತ್ತು ಮುಂಬೈನಲ್ಲಿ 26//11 ರಂದು ನಡೆದ ಭಯೋತ್ಪಾದಕ ದಾಳಿಗಳಿಗೆ ಕಾರಣಕರ್ತರು ಯಾರು? ಅವರು ಎಲ್ಲಿದ್ದರು ಮತ್ತು ಎಲ್ಲಿದ್ದಾರೆಂಬುದು ಇಡೀ ವಿಶ್ವಕ್ಕೇ ಗೊತ್ತಿದೆ. ಭಯೋತ್ಪಾದನೆ ಮತ್ತು ಅದನ್ನು ಪೋಷಿಸುವವರ ವಿರುದ್ಧ ನಿರ್ಣಾಯಕ ಹೋರಾಟ ಮಾಡಬೇಕಾದ ಅಗತ್ಯ ಹೆಚ್ಚಿದೆ ಎಂದು ಪಾಕಿಸ್ತಾನದ ಹೆಸರನ್ನು ಎತ್ತದೆಯೇ ವಾಗ್ದಾಳಿ ನಡೆಸಿದ್ದಾರೆ.