ಉಪಚುನಾವಣೆ ಘೋಷಣೆ, ಅನರ್ಹರ ಅಳಲು: ಕುತೂಹಲ ಮೂಡಿಸಿದ ಅಮಿತ್ ಶಾ – ಯಡಿಯೂರಪ್ಪ ಭೇಟಿ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ಭೇಟಿಯಾಗಲಿರುವ ಸಿಎಂ ಅನರ್ಹ ಶಾಸಕರ ವಿಷಯ ಕುರಿತು ಚರ್ಚೆ ನಡೆಸಲಿದ್ದಾರೆ.

ನಿನ್ನೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಆಕ್ರೋಶ ಹೊರಹಾಕಿದ ಅನರ್ಹ ಶಾಸಕರು, ತಮಗೆ ಕಾನೂನು ಸಮರಕ್ಕೆ ಬೆಂಬಲ ಸೂಚಿಸುವಂತೆ ಕೋರಿದ್ದರು. ಏಕಾಏಕಿ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ತಮ್ಮ ಭವಿಷ್ಯದ ಕುರಿತು ಆತಂಕಗೊಂಡಿದ್ದಾರೆ.

ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್​ ತೀರ್ಪು ಬರುವವರೆಗೆ ಅನರ್ಹರು ಉಪಚುನಾವಣೆಗೆ ಸ್ಪರ್ಧಿಸುವಂತಿಲ್ಲ.ಇದರಿಂದ ರಾಜಕೀಯ ಭವಿಷ್ಯವೇ ಅಡ್ಡಕತ್ತರಿಗೆ ಸಿಲುಕಿದೆ ಎಂದು ಮುಖ್ಯಮಂತ್ರಿ ಅವರೊಂದಿಗೆ ಅನರ್ಹ ಶಾಸಕರು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಆಗಸ್ಟ್​ 23ರಂದು ದೆಹಲಿಗೆ ತೆರಳಿದ್ದ ಸಿಎಂ ಬಿಎಸ್​ ಯಡಿಯೂರಪ್ಪ ಅನರ್ಹ ಶಾಸಕರನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ಮಾಡಿಸಲು ತಯಾರಿ ನಡೆಸಿದ್ದರು. ಈ ಭೇಟಿಗೂ ಮುನ್ನ ಅನರ್ಹ ಶಾಸಕರೊಂದಿಗೆ ಗೌಪ್ಯ ಸಭೆ ನಡೆಸಲಾಗಿತ್ತು.

ಆದರೆ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಮಾತ್ರ ಅನರ್ಹ ಶಾಸಕರನ್ನು ಭೇಟಿ ಮಾಡಲು ನಿರಾಕರಿಸಿದ್ದರು. ಅಲ್ಲದೇ, ಅನರ್ಹ ಶಾಸಕರನ್ನು ಭೇಟಿ ಮಾಡಿಸಲು ವಿಫಲ ಯತ್ನ ನಡೆಸಿದ ಬಿಎಸ್​ ಯಡಿಯೂರಪ್ಪ ನಡೆಗೆ ಶಾ ಗರಂ ಆಗಿದ್ದಾರೆ ಎನ್ನಲಾಗಿತ್ತು. ಇದೀಗ ಅನರ್ಹರ ಶಾಸಕರೇ ಮುಖ್ಯಮಂತ್ರಿ ಹಾಗೂ ಆಪರೇಷನ್ ಕಮಲ ರೂವಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಅಮಿತ್ ಶಾ ಅವರ ಭೇಟಿಯು ಕುತೂಹಲಕ್ಕೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ