ಹ್ಯೂಸ್ಟನ್: ‘ಹೌಡಿ ಮೋದಿ’ ಮೇನಿಯಾ ಈಗ ಅಮೆರಿಕದಾದ್ಯಂತ ಮನೆ ಮಾಡಿದೆ. ಅದರಲ್ಲೂ ಭಾರತೀಯ ಮೂಲದ ಅಮೆರಿಕನ್ನರಿಗೆ ಹಬ್ಬದ ವಾತಾವರಣ. ಮೋದಿಯವರನ್ನ ಭೇಟಿ ಮಾಡಬೇಕು, ನೋಡಬೇಕು ಅನ್ನೋ ತವಕ. ಇಲ್ಲೊಬ್ಬ ಬಾಲಕನಿದ್ದಾನೆ. ಆತನ ಹೆಸರು ಸ್ಪರ್ಶ್ ಶಾ. ಆತನಿಗೂ ಮೋದಿಯವರನ್ನು ಭೇಟಿ ಮಾಡಬೇಕೆಂಬ ಹಂಬಲ. ಅಷ್ಟೇ ಅಲ್ಲ, ಮೋದಿ ಎದುರು ಭಾರತದ ರಾಷ್ಟ್ರಗೀತೆ ಹಾಡಬೇಕೆಂಬ ತವಕ.
ಸ್ಪರ್ಶ್ ಶಾಗೆ ವಿಚಿತ್ರವಾದ ರೋಗವೊಂದು ಕಾಡುತ್ತಿದೆ. ಆ ಖಾಯಿಲೆ ಹೆಸರು ‘ಆಸ್ಟಿಯೋಜೆನಿಸಿಸ್ ಇಂಪರ್ಫೆಕ್ಟಾ’. ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಸ್ಪರ್ಶ್, ಬಹುಮುಖ ಪ್ರತಿಭೆ. ವೀಲ್ ಚೇರ್ನಲ್ಲೇ ಜೀವನ ಸಾಗಿಸುತ್ತಿರುವ ಸ್ಪರ್ಶ್, ಅದ್ಭುತ ರ್ಯಾಪರ್, ಹಾಡುಗಾರ, ಗೀತ ರಚನೆಕಾರ ಹಾಗೂ ಸ್ಫೂರ್ತಿದಾಯಕ ಮಾತುಗಾರ.
ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಸ್ಪರ್ಶ್ ಶಾ, ಖಾಯಿಲೆಯಿಂದಾಗಿ ಕಳೆದ ಕೆಲ ವರ್ಷಗಳಿಂದ ಒಟ್ಟು 130 ಮೂಳೆಗಳನ್ನು ಮುರಿದುಕೊಂಡಿದ್ದಾನೆ. ವಿಶ್ವದ ಖ್ಯಾತ ರ್ಯಾಪರ್ಗಳಲ್ಲಿ ಒಬ್ಬರಾದ ಎಮಿನೆಮ್ ರೀತಿ ಲಕ್ಷಾಂತರ ಜನರ ಎದುರಿಗೆ ಪ್ರದರ್ಶನ ನೀಡಬೇಕು ಅನ್ನೋದು ಸ್ಪರ್ಶ್ ಶಾ ಕನಸು. 2018 ಮಾರ್ಚ್ನಲ್ಲಿ ರಿಲೀಸ್ ಆದ ಬ್ರಿಟ್ಟಲ್ ಬೋನ್ ರ್ಯಾಪರ್ ಎಂಬ ಸಾಕ್ಷ್ಯಚಿತ್ರದಲ್ಲಿ ಸ್ಪರ್ಶ್ ಶಾ ಅವರ ಜೀವನಗಾಥೆ, ಸೂಕ್ಷ್ಮವಾದ ಮೂಳೆಗಳ ಜೊತೆಗಿನ ಹೋರಾಟದ ಬದುಕು, ಈ ವಿಚಿತ್ರ ರೋಗದಿಂದ ಅವರು ಅನುಭವಿಸುತ್ತಿರುವ ಸಂಕಷ್ಟವನ್ನು ಈ ಸಾಕ್ಷ್ಯಚಿತ್ರದಲ್ಲಿ ಬಿಂಬಿಸಲಾಗಿದೆ. ಇದೀಗ ಸ್ಪರ್ಶ್ ಶಾ ಮತ್ತೆ ಸುದ್ದಿಯಲ್ಲಿದ್ದಾರೆ, ಅದೂ ಕೂಡಾ ಮೋದಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡಲು ಆಯ್ಕೆ ಆಗುವ ಮೂಲಕ. ಮೋದಿ ಅವರನ್ನು ಪ್ರತ್ಯಕ್ಷವಾಗಿ ನೋಡಬೇಕೆಂಬ ಹಂಬಲದಲ್ಲಿರುವ ಸ್ಪರ್ಶ್ ಶಾ, ಅವರ ಎದುರು ರಾಷ್ಟ್ರಗೀತೆಯನ್ನೂ ಹಾಡುವ ಅವಕಾಶ ಪಡೆದು ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಇದು ನನ್ನ ಜೀವನದ ಅತ್ಯಂತ ದೊಡ್ಡ ಘಟನೆ ಎಂದು ಹೇಳಿಕೊಂಡಿರುವ ಸ್ಪರ್ಶ್ ಶಾ, ಅಷ್ಟೊಂದು ಜನರ ಸಮ್ಮುಖದಲ್ಲಿ ಜನಗಣಮನ ಹಾಡೋದಕ್ಕೆ ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ. ಅದೂ ಕೂಡಾ ಮೋದಿಯವರ ಎದುರಿಗೆ! ಇದೇ ಮೊದಲ ಬಾರಿಗೆ ಮೋದಿಯವರನ್ನ ನೋಡುವ ಭಾಗ್ಯ ಸಿಕ್ಕಿದೆ ಎನ್ನುವ ಸ್ಪರ್ಶ್ ಶಾ, ಈ ಹಿಂದೆ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಮೋದಿ ಭಾಷಣ ಮಾಡುವಾಗ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರಂತೆ. ಆದರೆ ಟಿವಿಯಲ್ಲಿ ನೋಡಲಷ್ಟೇ ಸಾಧ್ಯವಾಯ್ತು ಎಂದು ನೆನಪಿಸಿಕೊಂಡರು.
ದೇವರ ಕೃಪೆಯಿಂದ ಮೋದಿಯವರನ್ನು ನೋಡುವ ಭಾಗ್ಯ ಸಿಕ್ಕಿದೆ ಎನ್ನುವ ಸ್ಪರ್ಶ್ ಶಾ, ಅವರನ್ನು ಭೇಟಿಯಾಗಿ ಅವರ ಎದುರು ರಾಷ್ಟ್ರಗೀತೆ ಹಾಡುತ್ತೇನೆ ಎಂದು ಹೆಮ್ಮೆಯಿಂದ ಹೇಳ್ತಾರೆ.
ಖ್ಯಾತ ರ್ಯಾಪರ್ ಎಮೆನೆಮ್ ಅವರ ‘ನಾಟ್ ಅಫ್ರೈಡ್’ ಗೀತೆಗೆ ವೀಡಿಯೋ ಮಾಡಿದ ಸ್ಪರ್ಶ್ ಶಾ, ಮೊದಲ ಬಾರಿಗೆ ಸಾರ್ವಜನಿಕ ವಲಯದಲ್ಲಿ ಗುರ್ತಿಸಿಕೊಂಡರು. ಆನ್ಲೈನ್ನಲ್ಲಿ 65 ದಶಲಕ್ಷ ಜನರು ಈ ವೀಡಿಯೋ ನೋಡಿದ್ದರು. ಎಮೆನೆಮ್ ಕೂಡಾ ಸ್ಪರ್ಶ್ನ ಈ ವೀಡಿಯೋವನ್ನು ಟ್ವೀಟ್ ಮಾಡಿದ್ದರು. ಆಗ ಸ್ಪರ್ಶ್ ಹೆಸರು ಹಾಗೂ ವೀಡಿಯೋ ವೈರಲ್ ಆಗಿತ್ತು.
ಸ್ಪರ್ಶ್ ಶಾ ಅವರ ಸ್ಫೂರ್ತಿದಾಯಕ ಮಾತುಗಳು ಲಕ್ಷಾಂತರ ಜನರ ಬದುಕು ಬದಲಿಸಿದೆ. ಅಸಾಧ್ಯ ಅನ್ನೋದನ್ನು ಸಾಧ್ಯವಾಗಿಸಿದೆ. ಬ್ರಿಟನ್ನ ಟಿವಿ ಶೋ ಬಿಗ್ ಶಾಟ್ಸ್ ಲಿಟಲ್ ಶಾಟ್ಸ್ ಕಾರ್ಯಕಮದಲ್ಲೂ ಶಾ ಭಾಗಿಯಾದ್ದರು.