ಬೆಂಗಳೂರು, ಸೆ.21- ಬೆಂಗಳೂರು ಮಹಾನಗರದ ಏಳು ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಜಂಟಿ ಸಹಭಾಗಿತ್ವದಲ್ಲಿ ಮರು ನಿರ್ಮಾಣ ಮತ್ತು ಅಭಿವೃದ್ಧಿಗೊಳಿಸುವ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಶೇ.65:30 ಅನುಪಾತದಲ್ಲಿ 60 ವರ್ಷಗಳ ಗುತ್ತಿಗೆಗೆ ಕೆ.ಜೆ.ಜಾರ್ಜ್ ಪಾಲುದಾರಿಕೆಯ ಎಂಬೆಸ್ಸಿ ಸಂಸ್ಥೆಗೆ ನೀಡುವ ಸಂಬಂಧ ಪೂರ್ಣಗೊಳಿಸಲಾಗಿದ್ದ ಟೆಂಡರ್ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಹಾಗೂ ಸಂಪೂರ್ಣ ವಿವರಗಳೊಂದಿಗೆ ಕಡತ ಮಂಡಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಬಿಜೆಪಿ ವಕ್ತಾರರಾದ ಎನ್.ಆರ್.ರಮೇಶ್ ಅವರು ಈ ಪ್ರಕ್ರಿಯೆಯಲ್ಲಿ ಅವ್ಯವಹಾರವಾಗಿದೆ ಎಂದು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿ ಐದು ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬೆಲೆಬಾಳುವ ಸರ್ಕಾರಿ ಸ್ವತ್ತುಗಳನ್ನು ಕಬಳಿಸುವ ದೊಡ್ಡ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದರ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ತಡೆಹಿಡಿಯುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಇಂದಿರಾನಗರ, ಎಚ್ಎಸ್ಆರ್ ಬಡಾವಣೆ, ಆರ್ಟಿ ನಗರ, ಹಾಸ್ಟಿಂಗ್ ಟೌನ್, ಕೋರಮಂಗಲ, ವಿಜಯನಗರ ಮತ್ತು ಸದಾಶಿವನಗರ ಬಡಾವಣೆಯ ಏಳು ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಜಂಟಿ ಸಹಭಾಗಿತ್ವದಲ್ಲಿ ಮರು ನಿರ್ಮಾಣ ಮಾಡುವ ಮತ್ತು ಅಭಿವೃದ್ಧಿ ಮಾಡುವ ಹೆಸರಿನಲ್ಲಿ 65:30ರ ಅನುಪಾತದಲ್ಲಿ 60 ವರ್ಷಗಳ ಅವಧಿಗೆ ಕೆ.ಜೆ.ಜಾರ್ಜ್ ಪಾಲುದಾರಿಕೆಯ ಎಂಬೆಸ್ಸಿ ಸಂಸ್ಥೆಗೆ ಟೆಂಡರ್ ನೀಡಲಾಗಿತ್ತು.
ಸರ್ಕಾರಿ ಸ್ವತ್ತುಗಳನ್ನು ಕಬಳಿಸಲು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರ್ಜ್ ಒಡೆತನದ ಸಂಸ್ಥೆಗೆ ಬಿಡಿಎ ಆಯುಕ್ತ ಶಾಮ್ಭಟ್ ಅವರು ವ್ಯವಸ್ಥಿತ ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದ ರಮೇಶ್ ಅವರು ಈ ಹಗರಣ ಸಂಬಂಧ ಎಸಿಬಿ, ಬಿಎಂಟಿಎಫ್, ಲೋಕಾಯುಕ್ತದಲ್ಲಿ ದೂರುಗಳನ್ನು ದಾಖಲಿಸಿ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಈಗ ಅವರ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಂತಾಗಿದೆ.