ರಾಜ್ಯ ಸರ್ಕಾರದಿಂದ ಕುಂದಾನಗರಿ ಬೆಳಗಾವಿಯನ್ನೂ ಇಬ್ಭಾಗಿಸಲು ಚಿಂತನೆ

ಬೆಂಗಳೂರು, ಸೆ.21- ಗಣಿ ಜಿಲ್ಲೆ ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡಲು ಮುಂದಾಗಿರುವ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರ ಕುಂದಾನಗರಿ ಬೆಳಗಾವಿಯನ್ನೂ ಇಬ್ಭಾಗಿಸಲು ಚಿಂತನೆ ನಡೆಸಿದೆ.

ಜಿಲ್ಲೆಯ ಬಹುದಿನಗಳ ಬೇಡಿಕೆಯಂತೆ ಬೆಳಗಾವಿಯನ್ನು ವಿಭಾಗಿಸಿ ಗೋಕಾಕ್ ಮತ್ತು ಚಿಕ್ಕೋಡಿ ಜಿಲ್ಲೆ ಮಾಡುವ ಪ್ರಸ್ತಾವನೆ ಮತ್ತೆ ಮುನ್ನಲೆಗೆ ಬಂದಿದೆ.

ಎರಡು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಬಳ್ಳಾರಿಯನ್ನು ವಿಭಜಿಸಿ ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯನ್ನಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ  ಮಾಡುವುದಾಗಿ ಹೇಳಿದ್ದಾರೆ.

ಈಗ ಬೆಂಗಳೂರನ್ನು ಹೊರತುಪಡಿಸಿದರೆ ರಾಜ್ಯದಲ್ಲೇ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು(18) ಹೊಂದಿರುವ ಜಿಲ್ಲೆ ಎಂಬ ಕೀರ್ತಿಗೆ ಪಾತ್ರರಾಗಿರುವ ಬೆಳಗಾವಿಯನ್ನು ಮೂರು ಭಾಗಗಳನ್ನಾಗಿ ಇಬ್ಭಾಗಿಸಿ ಚಿಕ್ಕೋಡಿ ಹಾಗೂ ಗೋಕಾಕ್ ಕ್ಷೇತ್ರಗಳನ್ನು ಜಿಲ್ಲಾ ಕೇಂದ್ರಗಳನ್ನಾಗಿ  ಘೋಷಣೆ ಮಾಡುವ ಸಾಧ್ಯತೆ ಇದೆ.

ಬೆಳಗಾವಿಯನ್ನು ಮೂರು ಜಿಲ್ಲೆಗಳನ್ನಾಗಿ ಮಾಡಬೇಕೆಂಬ ಬೇಡಿಕೆ ನಿನ್ನೆಮೊನ್ನೆಯದಲ್ಲ.  ಕಳೆದ ಹಲವು ದಶಕಗಳಿಂದ ಇದಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಆದರೆ ಪದೆ ಪದೇ ಗಡಿ ವಿವಾದವನ್ನು  ಮುಂದಿಟ್ಟುಕೊಂಡು ಕ್ಯಾತೆ ತೆಗೆಯುವ ಎಂಇಎಸ್‍ಗೆ ಪಾಠ ಕಲಿಸಲೆಂದೇ ಜಿಲ್ಲೆಯ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು.

ಬೆಳಗಾವಿಯನ್ನು  ವಿಭಜಿಸಿದರೆ , ಮರಾಠಿಗರ ಪ್ರಾಬಲ್ಯ ಹೆಚ್ಚಿರುವ ಖಾನಾಪುರ, ಬೆಳಗಾವಿ ಉತ್ತರ, ಗ್ರಾಮೀಣ, ಗೋಕಾಕ್ ಮತ್ತಿತರ  ಕಡೆ ಮರಾಠಿಗರು  ಹೆಚ್ಚಾಗಬಹುದೆಂಬ ಕಾರಣಕ್ಕಾಗಿ ಸರ್ಕಾರ ಪ್ರಸ್ತಾವನೆಯನ್ನು ತಡೆ ಹಿಡಿದಿತ್ತು.

ಒಂದು ವೇಳೆ ಬೆಳಗಾವಿಯನ್ನು  ಇಬ್ಭಾಗಿಸಿ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರ ಮಾಡಿ ಇದಕ್ಕೆ ಅಥಣಿ, ರಾಯಭಾಗ, ಹುಕ್ಕೇರಿ, ಖಾನಾಪುರ ಮತ್ತು ಮೂಡಲಗಿ  ಕ್ಷೇತ್ರಗಳು ಇಲ್ಲಿಗೆ ಸೇರ್ಪಡೆಯಾಗಲಿವೆ.

ಗೋಕಾಕ್‍ಗೆ ರಾಮದುರ್ಗ, ಸವದತ್ತಿ, ಬೈಲಹೊಂಗಲ, ಅರಬಾವಿ , ಕ್ಷೇತ್ರಗಳು ಸೇರ್ಪಡೆಯಾದರೆ, ಬೆಳಗಾವಿಗೆ ಸವದತ್ತಿ, ಕಿತ್ತೂರು,  ಬೈಲಹೊಂಗಲ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ ಕ್ಷೇತ್ರಗಳು ಸೇರ್ಪಡೆಯಾಗಲಿವೆ.

ಆಡಳಿತದ ದೃಷ್ಟಿಯಿಂದ ಬೆಳಗಾವಿಯನ್ನು ವಿಭಜಿಸುವುದು ಸೂಕ್ತ ಎಂಬ ಮಾತುಗಳು ಕೇಳಿಬಂದಿವೆಯಾದರೂ ಅನಗತ್ಯವಾಗಿ ಎಂಇಎಸ್‍ನಿಂದ ಮತ್ತೊಂದು ಅಸ್ತ್ರ ನೀಡಬಾರದೆಂಬ ಕಾರಣಕ್ಕಾಗಿ ಸರ್ಕಾರ ಸಾಕಷ್ಟು ಅಳೆದು ತೂಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ