ಬೆಂಗಳೂರು, ಸೆ.21- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಟಟೋಪಗಳಿಗೆ ಇನ್ನಷ್ಟು ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಬಿಜೆಪಿ ವರಿಷ್ಠರು ಇನ್ನೊಂದು ಸಲಹೆಗಾರರ ಹುದ್ದೆ ಸೃಷ್ಟಿಸಲು ಸೂಚನೆ ಕೊಟ್ಟಿದ್ದಾರೆ.
ವಿಧಾನಪರಿಷತ್ನ ಮಾಜಿ ಸದಸ್ಯ ಹಾಗೂ ಆರ್.ಎಸ್.ಎಸ್ನ ಕಟ್ಟಾಳು ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕಗೊಳ್ಳಲಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮಿನಾರಾಯಣ ಅವರು ನೇಮಕಗೊಂಡಿದ್ದಾರೆ. ಇವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.
ಇದೀಗ ಗಣೇಶ್ಕಾರ್ನಿಕ್ ಅವರನ್ನು ಮುಖ್ಯಮಂತ್ರಿಗಳ ಮತ್ತೊಬ್ಬ ಸಲಹೆಗಾರರನ್ನಾಗಿ ನೇಮಿಸಲು ವರಿಷ್ಠರು ತೀರ್ಮಾನಿಸಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಆದೇಶ ಹೊರಬೀಳಲಿದ್ದು, ಇವರಿಗೂ ಸಹ ಸಂಪುಟ ದರ್ಜೆಯ ಸ್ಥಾನಮಾನ ಸಿಗಲಿದೆ.
ಗಣೇಶ್ ಕಾರ್ನಿಕ್ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಕ ಮಾಡಿರುವುದರ ಹಿಂದೆ ವರಿಷ್ಠರ ಬೇರೆಯದೇ ಆದ ಲೆಕ್ಕಾಚಾರ ಇದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳ ಬಳಿ ಇರುವ ಪ್ರತಿಯೊಂದು ಕಡತಗಳನ್ನು ಪರಿಶೀಲಿಸಿ ಗಣೇಶ್ ಕಾರ್ನಿಕ್ ಒಪ್ಪಿದ ನಂತರವೇ ಸಹಿ ಹಾಕಬೇಕು. ವಿಶೇಷವಾಗಿ ಅಧಿಕಾರಿಗಳ ವರ್ಗಾವರ್ಗಿ, ನೇಮಕಾತಿ, ಕೆಐಎಡಿಬಿ ಮೂಲಕ ಉದ್ಯಮಿಗಳಿಗೆ ಭೂಮಿ ನೀಡುವುದು, ಡಿನೋಟಿಫಿಕೇಷನ್ಗೆ ಸಂಬಂಧಿಸಿದ ಕಡತಗಳು ಸೇರಿದಂತೆ ಅತಿ ಮಹತ್ವದ ಕಡತಗಳನ್ನು ನೋಡಿಕೊಳ್ಳುವ ಉಸ್ತುವಾರಿ ಇವರದ್ದಾಗಿರುತ್ತದೆ.
ಕಾರ್ನಿಕ್ ಗಮನಕ್ಕೆ ತಾರದೆ ಯಾವ ಕಡತಗಳು ಸಹ ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು ಅವರು ಪರಿಶೀಲಿಸಿದ ನಂತರವೇ ಸಿಎಂ ಸಹಿ ಹಾಕಬೇಕಾಗುತ್ತದೆ.
ಈ ಹಿಂದೆ ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಸಹಿಯನ್ನು ಬೇರೊಬ್ಬರು ನಕಲು ಮಾಡುತ್ತಿದ್ದಾರೆ ಎಂದು ಖುದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು.
ಪ್ರಮುಖವಾಗಿ ಬಿಬಿಎಂಪಿ, ಬಿಡಿಎ, ಕೆಐಎಡಿಬಿ, ಪ್ರಮುಖ ಇಲಾಖೆಗಳಾದ ಗೃಹ, ಲೋಕೋಪಯೋಗಿ, ಹಣಕಾಸು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಕಂದಾಯ , ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ನೀರಾವರಿ ಸೇರಿದಂತೆ ಹಲವು ಇಲಾಖೆಗಳ ಪ್ರಮುಖ ನಿರ್ಧಾರಗಳ ಮೇಲೆ ಕಾರ್ನಿಕ್ ಕಣ್ಣಾಡಿಸಲಿದ್ದಾರೆ.
ಈಗಾಗಲೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಪ್ರತಿಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಹೀಗಾಗಿ ಕಾರ್ನಿಕ್ ಮೂಲಕ ಪರೋಕ್ಷವಾಗಿ ಬಿಎಸ್ವೈ ಅವರನ್ನು ನಿಯಂತ್ರಿಸುವ ಕಾರ್ಯಕ್ಕೆ ಹೈಕಮಾಂಡ್ ಕೈ ಹಾಕಿದೆ.