ದಂಡದ ಮೊತ್ತವನ್ನು ಅಲ್ಪಪ್ರಮಾಣದಲ್ಲಿ ಇಳಿಕೆ-ಸಂಜೆಯೊಳಗೆ ಅಧಿಕೃತ ಆದೇಶ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಸೆ.20- ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಅಲ್ಪಪ್ರಮಾಣದಲ್ಲಿ ಇಳಿಕೆ ಮಾಡಿ  ಸಂಜೆಯೊಳಗೆ ಅಧಿಕೃತ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಈ ಮೂಲಕ ಕಳೆದ ಎರಡು ವಾರಗಳಿಂದ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜ್ಯ ಸರ್ಕಾರ ಕೊನೆಗೂ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆ ದಂಡದ ಮೊತ್ತವನ್ನು ಅಲ್ಪಪ್ರಮಾಣದಲ್ಲಿ ಕಡಿಮೆ ಮಾಡಿ ಸಾರಿಗೆ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಲಿದ್ದಾರೆ ಯಾರಿಗೂ ಕೂಡ ಹೊರಯಾಗದಂತೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ  ಮೋಟಾರು ವಾಹನ ಕಾಯ್ದೆಗೆ ಗುಜರಾತ್ ಮಾದರಿಯಲ್ಲಿ ತಿದ್ದುಪಡಿ ಮಾಡಿ ಕಾನೂನು ಇಲಾಖೆ ನೀಡಿದ ಸಲಹೆಯನ್ನು ಪರಿಗಣಿಸಿ  ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡದ ಮೊತ್ತವನ್ನು ಎಷ್ಟು ಪ್ರಮಾಣದಲ್ಲಿ ಇಳಿಕೆ ಮಾಡಬೇಕೆಂಬುದನ್ನು ಈಗಾಗಲೇ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಅವರು ನೀಡಿರುವ ಸಲಹೆಗಳನ್ನು ಪರಿಗಣಿಸಿ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಿದೆ ಎಂದರು.

ಈಗಾಗಲೇ ಗೃಹ, ಸಾರಿಗೆ ಇಲಾಖೆ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಯಾವ ಯಾವ ನಿಯಮಗಳನ್ನು ಉಲ್ಲಂಘಿಸಿದರೆ ಎಷ್ಟು ದಂಡ ಹಾಕಬೇಕು ಎಂಬುದನ್ನು ಅಧಿಕಾರಿಗಳು ತೀರ್ಮಾನಿಸುತ್ತಾರೆ.

ಬಿಜೆಪಿ ಕಚೇರಿಯಲ್ಲಿ  ಇಂದು ವಿಡಿಯೋ ಕಾನ್ಫರೆನ್ಸ್ ಇದ್ದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಎಲ್ಲ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುವರು ನಾನು ಕೂಡ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ  ಸಚಿವ ಲಕ್ಷ್ಮಣ್ ಸವದಿ, ಸಿಎಂ ಅವರ ನಿವಾಸಕ್ಕೆ ಆಗಮಿಸಿ ಸಂಚಾರಿ ನಿಯಮ ದಂಡದ ಪ್ರಮಾಣವನ್ನು ಇಳಿಕೆ ಮಾಡುವ ಬಗ್ಗೆ ಮಾತುಕತೆ ನಡೆಸಿದರು.

ಮೂಲಗಳ ಪ್ರಕಾರ ಸಾರಿಗೆ ಇಲಾಖೆ ಹೊರಡಿಸಿರುವ ಪರಿಷ್ಕøತ ದಂಡದ ಪ್ರಕಾರ ಮದ್ಯಪಾನ ಸೇವನೆ ಹಾಗೂ 18 ವರ್ಷದೊಳಗಿನ ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ  ಈಗಾಗಲೇ ಕೇಂದ್ರ ಸರ್ಕಾರ ನಿಗದಿಪಡಿಸಿರುವ ದಂಡದ ಮೊತ್ತ ಯಥಾಸ್ಥಿತಿಯಲ್ಲೇ ಇರಲಿದೆ.

ಕೇಂದ್ರ ಸರ್ಕಾರದ ಮೋಟಾರು ವಾಹನ(ತಿದ್ದುಪಡಿ) ಮಸೂದೆ ಕಾಯ್ದೆ ಪ್ರಕಾರ ಮದ್ಯಸೇವಿಸಿ ವಾಹನ ಚಾಲನೆ ಮಾಡಿದರೆ 10 ಸಾವಿರ ರೂ. ಹಾಗೂ ಅಪ್ರಾಪ್ತರು ಸಿಕ್ಕಿಬಿದ್ದರೆ  7,500 ರೂ. ದಂಡ ವಿಧಿಸಲಾಗುತ್ತದೆ.

ಕೇಂದ್ರ ಸರ್ಕಾರದ ಉದ್ದೇಶಿತ ಕಾಯ್ದೆಗೆ ಗುಜರಾತ್ ಸರ್ಕಾರ ತಿದ್ದುಪಡಿ ಮಾಡಿತ್ತು. ಈಗ ಕರ್ನಾಟಕ ಸರ್ಕಾರ ಇದೇ ಮಾದರಿಯನ್ನು ಮಾನದಂಡವಾಗಿಟ್ಟುಕೊಂಡು  ಕೆಲವು ನಿಯಮಗಳನ್ನು ಸಡಿಲಗೊಳಿಸಿದೆ.

ಕಾನೂನು ಮತ್ತು ಗೃಹ ಇಲಾಖೆ ಕೂಡ ಈ ಕಾಯ್ದೆಗೆ ತಿದ್ದುಪಡಿ ಮಾಡಲು  ಒಪ್ಪಿಗೆ ಸೂಚಿಸಿದೆ. ಇದರಂತೆ ರಾಜ್ಯದಲ್ಲಿ ಇನ್ನು ಮುಂದೆ ಹೆಲ್ಮೆಟ್ ರಹಿತ ಚಾಲನೆ ಮಾಡಿದರೆ 500 ರೂ, ಚಾಲನಾ ಪರವಾನಗಿ (ಡಿಎಲ್) ಇಲ್ಲದವರಿಗೆ  2500, ಅಪಾಯಕಾರಿ ಚಾಲನೆ ಮಾಡಿದರೆ 3000 ರೂ.  ದಂಡ ಬೀಳಲಿದೆ.

ಗುಜರಾತ್‍ನಲ್ಲಿ ಹೆಲ್ಮೆಟ್/ಸೀಟ್ ಬೆಲ್ಟ್ ಧರಿಸದಿರುವುದು- 1,000 ರಿಂದ 500 ರೂ, ಅಂಬುಲೆನ್ಸ್‍ಗೆ ಅಡ್ಡಿ ಮಾಡಿದರೆ-10,000 ದಿಂದ 1,000 ರೂ, ಪಿಯುಸಿ ಪಾಸಾಗದೇ ವಾಹನ ಹೊಂದಿದ್ದರೆ -10,000ದಿಂದ 3,000 ರೂ.ಪರಿಷ್ಕೃತ ದಂಡದ ಪ್ರಮಾಣವನ್ನು ವಿಧಿಸಲಾಗುತ್ತಿದೆ.

ಗುಜರಾತ್‍ನಲ್ಲೇ ಜಾರಿಗೆ ತಂದಿರುವ ನಿಯಮವನ್ನೇ ರಾಜ್ಯದಲ್ಲೂ ಅನುಸರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದರು. ಅದರಂತೆ ಇಂದು ಸಂಜೆಯಿಂದಲೇ ಪರಿಷ್ಕøತ ದಂಡ ಪ್ರಮಾಣ ರಾಜ್ಯದಲ್ಲೂ ಜಾರಿಗೆ ತರಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ