ಅನರ್ಹ ಶಾಸಕರ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಆಡಿಯೋ ಕ್ಯಾಸೆಟ್ಟು

ಬೆಂಗಳೂರು,ಸೆ.21-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸದಸ್ಯತ್ವದಿಂದ ಅನರ್ಹಗೊಂಡ ಹದಿನೇಳು ಮಂದಿ ಶಾಸಕರಿಗೆ ಒಂದು ಆಡಿಯೋ ಕ್ಯಾಸೆಟ್ ಅಡ್ಡಿಯಾಗಿ ಪರಿಣಮಿಸಿರುವ ಕುತೂಹಲಕಾರಿ ಅಂಶ ಬಹಿರಂಗವಾಗಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಹಿರಂಗವಾಗಿದ್ದ ಆಡಿಯೋ ಕ್ಯಾಸೆಟ್ಟು ಈಗ ಅನರ್ಹಗೊಂಡಿರುವ ಶಾಸಕರ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಆಪರೇಷನ್ ಕಮಲ ಕಾರ್ಯಾಚರಣೆ ಮಾಡುವ ಭರದಲ್ಲಿ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದ ಅಂದಿನ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೆ ನಿಮಗೆ ಯಾವ ತೊಂದರೆಯೂ ಇಲ್ಲ. ನ್ಯಾಯಾಂಗದಿಂದ ಹಿಡಿದು ಎಲ್ಲ ಹಂತಗಳಲ್ಲಿ ನಿಮ್ಮನ್ನು ರಕ್ಷಿಸುವ ವ್ಯವಸ್ಥೆಯಾಗಿದೆ ಎಂಬರ್ಥದ ಮಾತುಗಳನ್ನು ಯಡಿಯೂರಪ್ಪ ಅವರು ಆಡಿದ್ದರು.

ಅವತ್ತು ಆಪರೇಷನ್ ಕಮಲ ಕಾರ್ಯಾಚರಣೆ ನಡೆಸುವ ಭರದಲ್ಲಿ ಯಡಿಯೂರಪ್ಪ ಅವರಾಡಿದ ಈ ಮಾತುಗಳೇ ಇದೀಗ ಅನರ್ಹ ಶಾಸಕರ ಪಾಲಿಗೆ ಕಂಟಕವಾಗಿ ಪರಿಣಮಿಸಿವೆ.

ಹದಿನೇಳು ಮಂದಿ ಶಾಸಕರನ್ನು ಅನರ್ಹಗೊಳಿಸಿದ ಹಿಂದಿನ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರ ತೀರ್ಪಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ತ್ವರಿತಗತಿಯಲ್ಲಿ ತೀರ್ಪು ನೀಡಲು ಸುಪ್ರೀಂಕೋರ್ಟ್‍ಗೆ ಸಾಧ್ಯವಿದೆಯಾದರೂ ಅದೀಗ ಕ್ಯಾಸೆಟ್ ಬಾಂಬ್ ಬಿಸಿಯಿಂದ ಯೋಚನೆಗೆ ಬಿದ್ದಿದೆ.

ಒಂದು ವೇಳೆ ಹದಿನೇಳು ಶಾಸಕರ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡಿದರೆ ಸುಖಾ ಸುಮ್ಮನೆ ಬಹಿರಂಗಗೊಂಡ ಕ್ಯಾಸೆಟ್‍ಗೆ ಪೂರಕವಾಗಿ ತೀರ್ಪು ನೀಡಿದ ಅಪಖ್ಯಾತಿ ಬರಬಹುದು ಎಂಬುದು ಸುಪ್ರೀಂಕೋರ್ಟ್ ಯೋಚನೆ.

ಹೀಗಾಗಿ ಕೆಲ ದಿನಗಳ ಹಿಂದೆ ಹದಿನೇಳು ಶಾಸಕರ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡರೂ ಆ ಪ್ರಕ್ರಿಯೆಯನ್ನು ಸೆಪ್ಟೆಂಬರ್ 23 ಕ್ಕೆ ಮುಂದೂಡಿ ಆದೇಶ ನೀಡಲಾಗಿತ್ತಲ್ಲದೆ,ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಕೂಡಾ ವಿಚಾರಣೆ ಪ್ರಕ್ರಿಯೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು.

ಹೀಗೆ ಬಿಸಿ ಕೆಂಡದಂತಾಗಿರುವ ಅನರ್ಹ ಶಾಸಕರ ಪ್ರಕರಣ ಸೆಪ್ಟೆಂಬರ್ 23 ರಂದು ವಿಚಾರಣೆಗೆ ಬರಲಿದ್ದು ಯಥಾ ಪ್ರಕಾರ ಕ್ಯಾಸೆಟ್ ಬಾಂಬ್‍ನ ಬಿಸಿ ತಮಗೆ ತಗಲಬಹುದೇ?ಎಂಬ ಆತಂಕಕ್ಕೆ ಅನರ್ಹ ಶಾಸಕರು ಒಳಗಾಗಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ