ಬೆಂಗಳೂರು, ಸೆ.21- ಸಹಕಾರಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಸದ್ಯದಲ್ಲಿಯೇ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಸಹಕಾರಿ ಧುರೀಣರೊಂದಿಗೆ ಸಭೆ ನೆಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಕೇಂದ್ರ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ರೈತರ ಬೆಳೆ ಸಾಲ ಮನ್ನಾ ಹಣ 519 ಕೋಟಿ ರೂ. ಬಾಕಿ ಇದೆ ಎಂದು ಅಪೆಕ್ಸ್ ಬ್ಯಾಂಕ್ನ ಅಧಿಕಾರಿಗಳು ಹೇಳಿದ್ದಾರೆ 8-10 ದಿನಗಳಲ್ಲಿ ಆರ್ಥಿಖ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಸಹಕಾರ ಕ್ಷೇತ್ರ ಉಳಿಯಬೇಕು ಮತ್ತು ಬೆಳೆಯಬೇಕು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಅಪೆಕ್ಸ್ ಬ್ಯಾಂಕ್ ಚೆನ್ನಾಗಿ ಬೆಳೆಯಬೇಕು. ಯಾವುದೇ ತಯಾರಿ ಮಾಡಿಕೊಂಡು ಬಂದಿಲ್ಲದ ಕಾರಣ ಈಗ ಘೋಷಣೆ ಮಾಡಲು ಆಗುವುದಿಲ್ಲ. ಈ ಹಿಂದೆ ಒಳ್ಳೆ ಕೆಲಸ ಮಾಡುವವರನ್ನು ಕಟ್ಟಿ ಹಾಕುವ ಪ್ರಯತ್ನ ನಡೆದಿತ್ತು. ಆದರೆ, ರಾಜಣ್ಣ ಅವರು ಮತ್ತೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ ಎಂದರು.
ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗಿ ಹಲವು ಗ್ರಾಮಗಳು, ರಸ್ತೆ, ಸೇತುವೆ, ಮನೆಗಳು ಹಾನಿಗೀಡಾಗಿವೆ. ಆ ಭಾಗದ ನೆರವಿಗಾಗಿ ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡಬೇಕು ಎಂದು ಹೇಳಿದರು.
ಒಂದೆರಡು ತಿಂಗಳಲ್ಲಿ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಸಿಎಂ ಭರವಸೆ ನೀಡಿದರು.
ಕಾಮನ್ಖೇಡರ್ ಅಥಾರಿಟಿ ಮರು ಸ್ಥಾಪನೆ ಮಾಡುವ ಬಗ್ಗೆ ಸಹಮತ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಿರಿಯ ಸಹಕಾರಿ ಧುರೀಣರೊಂದಿಗೆ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಸಮಾಲೋಚನೆ ಮಾಡೋಣ ಎಂದರು.
ರಾಜ್ಯ ಸರ್ಕಾರ ಸಹಕಾರಿಗಳ ಭಾವನೆಗೆ ಪೂರಕವಾಗಿ ಸ್ಪಂದಿಸಲಿದೆ. ಎಲೆಕ್ಷನ್ ಅಥಾರಿಟಿ ಮರು ಸ್ಥಾಪನೆ ಮಾಡಲು ಪರಿಶೀಲಿಸಬೇಕಾಗಿದೆ. ವೈದ್ಯನಾಥನ್ ಸಮಿತಿ ವರದಿಯ ಆಶಯಕ್ಕೆ ಪೂರಕವಾಗಿ ಅಧಿಕಾರ ವಿಕೇಂದ್ರೀಕರಣವಾಗಬೇಕು ಎಂಬ ಭಾವನೆಗೆ ಮುಖ್ಯಮಂತ್ರಿಯವರು ಸಹಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಸಂಕಷ್ಟ ಎದುರಾಗಿದ್ದು, ನೆರವಿಗೆ ಧಾವಿಸಬೇಕು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, 2017ನೇ ಸಾಲಿನ ರೈತರ ಸಾಲ ಮನ್ನಾ ಬಾಕಿ ಹಣ 165 ಕೋಟಿ ರೂ. ಡಿಸಿಸಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಬೇಕಾಗಿದೆ. 2018ರ ರೈತರ ಸಾಲ ಮನ್ನದ ಹಣ ನಿನ್ನೆ-ಮೊನ್ನೆ ಬಿಡುಗಡೆಯಾಗಿದ್ದು, ಅಪೆಕ್ಸ್ ಬ್ಯಾಂಕ್ಣಿಂದ 380ಕೋಟಿ ರೂ. ಇತರೆ ಬ್ಯಾಂಕ್ಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ರಾಜ್ದ 3.34 ಲಕ್ಷ ರೈತರು ಹಸಿರುಪಟ್ಟಿಗೆ ಬರಲು ಬಾಕಿ ಇದೆ. ಅವರ ಸಾಲದ ಬಾಪ್ತು 896 ಕೋಟಿ ಇದ್ದು, ಇನ್ನೂ ಗೊಂದಲ ಮುಂದುವರೆದಿದೆ. ಜುಲೈನಿಂದ ಇದುವರೆಗೆ 300 ಕೋಟಿ ರೂ. ಅಪೆಕ್ಸ್ ಬ್ಯಾಂಕ್ಗೆ ಹೊರೆಯಾಗಿದೆ. ಸಕಾಲಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗದೆ ಈ ರೀತಿ ಹೊರೆಯಾಗಿದೆ. ಸ್ವ-ಸಂಘ ಗಳಿಗೆ ನೀಡುವ ಸಾಲ, ಶೇ.3ರ ಬಡ್ಡಿಗೆ ನೀಡುವ ಸಾಲ, ಶೂನ್ಯ ಬಡ್ಡಿದರದಲ್ಲಿ ಸಾಲ, ಬಡ್ಡಿ ಸಹಾಯ ಧನ 591 ಕೋಟಿ ರೂ. ಬಾಕಿ ಇದೆ. ಸಕಾಲಕ್ಕೆ ಸರ್ಕಾರದಿಂದ ಬ್ಯಾಂಕುಗಳಿಗೆ ಹಣ ಬಿಡುಗಡೆ ಮಾಡಬೇಕು. ಆದಾಯ ತೆರಿಗೆಯನ್ನು 586 ಕೋಟಿ ರೂ. ಪಾವತಿಸಲಾಗಿದೆ. ವಾರ್ಷಿಕ 150ರಿಂದ 200 ಕೋಟಿ ಆದಾಯ ತೆರಿಗೆ ಪಾವತಿಸುತ್ತಿದ್ದು, ಕಳೆದ ವರ್ಷ ಅಪೆಕ್ಸ್ ಬ್ಯಾಂಕ್ 85 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಆದಾಯ ತೆರಿಗೆಯ ವಿನಾಯ್ತಿ ಪಡೆಯಬೇಕಾಗಿದೆ. ಅಲ್ಲದೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೇವಾ ನಿಯಂತ್ರಣದ ಬಗ್ಗೆ ಸಾಮಾನ್ಯ ಶ್ರೇಣಿ ಪ್ರಾಧಿಕಾರವನ್ನು ರಚಿಸುವ ಬಗ್ಗೆ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ರಾಜಣ್ಣ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಮೈಸೂರು ಮಿನರಲ್ಸ್ ಕಾಪೆರ್Çೀರೇಷನ್ನ 1400 ಕೋಟಿ ಠೇವಣಿಯಲ್ಲಿ 1064 ಕೋಟಿ ರೂ.ವನ್ನು ಸಾಲ ಮನ್ನಾ ಯೋಜನೆಗೆ ಬಿಡುಗಡೆ ಮಾಡಲಾಗಿದ್ದು, ಆ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಅಪೆಕ್ಸ್ ಬ್ಯಾಂಕ್ನಿಂದ 5 ಕೋಟಿ ರೂ. ಬೆಳಗಾವಿ ಡಿಸಿಸಿ ಬ್ಯಾಂಕ್ನಿಂದ 2 ಕೋಟಿ ಸೇರಿದಂತೆ ವಿವಿಧ ಜಿಲ್ಲೆಗಳ ಡಿಸಿಸಿ ಬ್ಯಾಂಕ್ಗಳಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದೇ ಸಂದರ್ಭದಲ್ಲಿ ದೇಣಿಗೆ ನೀಡಲಾಯಿತು.
ಮಾಜಿ ಸಚಿವರಾದ ಶಿವಾನಂದಪಾಟೀಲ್, ಎಚ್.ವೈ.ಮೇಟಿ, ಶಾಸಕ ಆರ್.ನರೇಂದ್ರ, ಮಾಜಿ ಶಾಸಕರಾದ ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಅಪೆಕ್ಸ್ ಬ್ಯಾಂಕ್ನ ನಿರ್ದೇಶಕ ಮಂಜುನಾಥ್ ಗೌಡ, ಸಹಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ ಮತ್ತಿತರರು ಪಾಲ್ಗೊಂಡಿದ್ದು.