ಅಕ್ರಮ ಒತ್ತುವರಿಗೆ ಒಳಗಾಗಿದ್ದ 37 ಕೋಟಿ ರೂ. ಮೌಲ್ಯದ ಜಮೀನು ಮರುವಶ

Varta Mitra News

ಬೆಂಗಳೂರು, ಸೆ.21- ಅಕ್ರಮ ಒತ್ತುವರಿಗೆ ಒಳಗಾಗಿದ್ದ 37 ಕೋಟಿ ರೂ. ಮೌಲ್ಯದ 6 ಎಕರೆ 3 ಗುಂಟೆ ಜಮೀನನ್ನು  ಬೆಂಗಳೂರು ನಗರ ಜಿಲ್ಲಾಡಳಿತ ಮರುವಶ ಪಡಿಸಿಕೊಂಡಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಬೇಗೂರು ಹೋಬಳಿ ಬೆಟ್ಟದಾಸನಪುರ ಸರ್ವೆ ನಂ.21ರಲ್ಲಿ 6 ಎಕರೆ, ಚಂದ್ರಶೇಖರಪುರ ಗ್ರಾಮದ ಸರ್ವೆ ನಂ.4ರಲ್ಲಿ 3 ಗುಂಟೆ ಜಮೀನನ್ನು ಇಂದು ಬೆಳಗ್ಗೆ ಕ್ಷಿಪ್ರ ಕಾರ್ಯಾಚರಣೆ ಮೂಲಕ ಬೆಂಗಳೂರು ಜಿಲ್ಲಾಡಳಿತ ಅಕ್ರಮ ಒತ್ತುವರಿಯನ್ನು ತೆರವು ಮಾಡಿದೆ.

ಬೆಟ್ಟದಾಸನಪುರ ಗ್ರಾಮದಲ್ಲಿ ಬಿಲಾಲ್‍ದರ್ಗಾ ಸೇರಿದಂತೆ ಕೆಲವು ಕಟ್ಟಡಗಳು ನಿರ್ಮಾಣಗೊಂಡಿದ್ದವು. ಸ್ಥಳೀಯ ಪ್ರಭಾವಿಗಳು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸುಮಾರು 60 ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡಲು ಪ್ರಯತ್ನ ಮಾಡಿದ್ದರು.

ಜತೆಗೆ ಚಂದ್ರಶೇಖರಪುರ ಗ್ರಾಮದಲ್ಲಿ 3 ಗುಂಟೆಯಲ್ಲಿ ಕೂಲಿ ಕಾರ್ಮಿಕರ ಶೆಡ್‍ಗಳನ್ನು ನಿರ್ಮಿಸಲಾಗಿತ್ತು. 8 ಸೀಟಿನ ಮನೆಗಳು ಮತ್ತು 20ಕ್ಕೂ ಹೆಚ್ಚು ಗುಡಿಸಲುಗಳು ನಿರ್ಮಾಣಗೊಂಡಿದ್ದವು.

ಹಲವು ಭಾರಿ ಎಚ್ಚರಿಕೆ ನೀಡಿದ್ದರೂ ಅಕ್ರಮ ಒತ್ತುವರಿ ತೆರವು ಮಾಡದೆ ಸ್ಥಳೀಯರು ಹಠ ಹಿಡಿದಿದ್ದರು. ಇಂದು ಬೆಳಗ್ಗೆ ಮೂರು ಜೆಸಿಬಿ ಯಂತ್ರದೊಂದಿಗೆ ತೆರಳಿದ ಅಧಿಕಾರಿಗಳು ಖಡಕ್ ವಾರ್ನಿಂಗ್ ಕೊಟ್ಟರು.

ಕೂಲಿ ಕಾರ್ಮಿಕರು ತಮ್ಮ ಗುಡಿಸಲು ಹಾಗೂ ಮನೆಯಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಿದರು. ನಂತರ ಅವುಗಳನ್ನು   ಕೆಡವಿ ಹಾಕಲಾಯಿತು.

ಆರಂಭದಲ್ಲಿ ಕೆಲವರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಎಲೆಕ್ಟ್ರಾನಿಕ್ ಸಿಟಿ ಪೆÇಲೀಸರು ಬಿಗಿ ಭದ್ರತೆ ಒದಗಿಸಿ ರಕ್ಷಣೆ ನೀಡಿದರು. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತೆರವು ಕಾರ್ಯ ಪೂರ್ಣಗೊಂಡಿತು.

ಜಿಲ್ಲಾಧಿಕಾರಿ ಶಿವಮೂರ್ತಿ, ಉಪವಿಭಾಗಾಧಿಕಾರಿ ಶಿವಣ್ಣ, ತಹಸೀಲ್ದಾರ್ ಶಿವಪ್ಪ ಲಂಬಾಣಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ