
ಬೆಂಗಳೂರು,ಸೆ.20- ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಉಳಿದಿರುವ ಅವಧಿಯನ್ನು ಬಿಜೆಪಿಯೇ ಪೂರ್ಣಗೊಳಿಸಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತಿಪಕ್ಷಗಳು ಏನೇ ಹೇಳಿಕೊಂಡರೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ನಾವು ಜನರಿಗೆ ನಿರೀಕ್ಷೆಗೆ ತಕ್ಕಂತೆ ಉಳಿದಿರುವ ಅವಧಿಯನ್ನು ಪೂರ್ಣ ಮಾಡುತ್ತೇವೆ. ಕಾಂಗ್ರೆಸ್-ಜೆಡಿಎಸ್ ಹಗಲುಗನಸು ಕಾಣುವುದು ಬೇಡ ಎಂದು ಕುಹುಕವಾಡಿದರು.
ಆಗೊಂದು ವೇಳೆ ಮಧ್ಯಂತರ ಚುನಾವಣೆ ನಡೆದರೂ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದರಲ್ಲಿ ಯಾವ ಅನುಮಾನವೂ ಬೇಡ. ಕೋಡಿಮಠದ ಶ್ರೀಗಳು ಮತ್ತೆ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಅಪಾರವಾದ ಗೌರವವಿದೆ. ಶ್ರೀಗಳೇ ಹೇಳಿದಂತೆ ಚುನಾವಣೆ ನಡೆದರೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡಿರುವ 17 ಶಾಸಕರಿಗೆ ಸುಪ್ರೀಂಕೋರ್ಟ್‍ನಲ್ಲಿ ನ್ಯಾಯ ಸಿಕ್ಕೇ ಸಿಗಲಿದೆ. ಅಂದಿನ ಸ್ಪೀಕರ್ ರಮೇಶ್‍ಕುಮಾರ್ ಅವರು ಸುಪ್ರೀಂಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿ ಇವರನ್ನು ಅನರ್ಹಗೊಳಿಸಿದ್ದಾರೆ. ಆದರೂ ನ್ಯಾಯಾಲಯದಲ್ಲಿ ಜಯ ಸಿಕ್ಕೇ ಸಿಗುತ್ತದೆ ಎಂದರು.
ಅನರ್ಹರಿಗೆ ಅನ್ಯಾಯವಾಗಿದ್ದರೂ ನಾವು ಅದನ್ನು ಸರಿಪಡಿಸುವ ಪ್ರಯತ್ನವನ್ನು ಮುಂದುವರೆಸಿದ್ದೇವೆ. ಸುಪ್ರೀಂಕೋರ್ಟ್‍ನಲ್ಲಿ ಬೇರೆ ಬೇರೆ ಕಾರಣಗಳಿಂದ ಅರ್ಜಿ ವಿಚಾರಣೆ ವಿಳಂಬವಾಗಿದೆ. ಆದರೂ ಅವರಿಗೆ ಕಾನೂನು ಸಮರದಲ್ಲಿ ಜಯ ಸಿಗಲಿದೆ. ರಮೇಶ್‍ಕುಮಾರ್ ತಮ್ಮನ್ನು ತಾವು 2ನೇ ಅಂಬೇಡ್ಕರ್ ಎಂದುಕೊಂಡಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಾನೇ 2ನೇ ದೇವರಾಜ ಅರಸು ಎಂಬಂತೆ ವರ್ತಿಸುತ್ತಿದ್ದಾರೆ. ಇವರಿಬ್ಬರು ಪರಸ್ಪರ ಹೊಗಳಕೊಂಡು ಸುಪ್ರೀಂಕೋರ್ಟ್‍ನ ನಿರ್ದೇಶನವನ್ನೇ ವ್ಯತಿರಿಕ್ತಗೊಳಿಸಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಇನ್ನು ಬಳ್ಳಾರಿ ಜಿಲ್ಲೆಯನ್ನು ವಿಭಾಗಿಸಿ ವಿಜಯನಗರ ಜಿಲ್ಲೆ ಮಾಡಲು ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಸ್ವಾಗತಿಸಿದ ಈಶ್ವರಪ್ಪ , ಇದರಿಂದ ಆ ಜಿಲ್ಲೆ ಅಭಿವೃದ್ಧಿಯಾಗಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸರ್ಕಾರ ಇದ್ದಾಗ ಮಾತ್ರ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ದಿಪಡಿಸಲಾಗಿತ್ತು. ಅದನ್ನು ಬಿಟ್ಟರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಇಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಅಭಿವೃದ್ದಿ ದೃಷ್ಟಿಯಿಂದ ಜಿಲ್ಲೆಯ ವಿಭಜನೆ ಒಳ್ಳೆಯದು ಎಂದು ಹೇಳಿದರು.