ಮೊಬೈಲ್ ಲೌಡ್‍ಸ್ಪೀಕರ್ ಬಳಕೆಗೆ ಬಿಎಂಟಿಸಿ ನಿರ್ಬಂಧ

ಬೆಂಗಳೂರು, ಸೆ.20-ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮೊಬೈಲ್ ಲೌಡ್‍ಸ್ಪೀಕರ್ ಬಳಕೆಗೆ ಬಿಎಂಟಿಸಿ ನಿರ್ಬಂಧ ಹೇರಿದೆ.

ಬಿಎಂಟಿಸಿಯ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮೊಬೈಲ್ ಲೌಡ್‍ಸ್ಪೀಕರ್‍ಗಳಲ್ಲಿ ಹಾಡುಗಳನ್ನು ಹಾಕುವುದನ್ನು ನಿರ್ಬಂಧಿಸಲಾಗಿದೆ.

ಈ ಸಂಬಂಧ ಬಿಎಂಟಿಸಿ ಸುತ್ತೋಲೆ ಹೊರಡಿಸಿದ್ದು, ಸಂಸ್ಥೆಯ ಬಸ್‍ಗಳಲ್ಲಿ  ಮೊಬೈಲ್ ಲೌಡ್‍ಸ್ಪೀಕರ್ ಬಳಕೆಯಿಂದ  ಪ್ರಯಾಣಿಕರಿಗೆ ತೊಂದರೆಯಾಗುವುದಲ್ಲದೆ, ಶಬ್ಧ ಮಾಲಿನ್ಯವೂ ಉಂಟಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಬಸ್‍ಗಳಲ್ಲೂ ಲೌಡ್‍ಸ್ಫೀಕರ್ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಈ ಸಂಬಂಧ ಬಸ್‍ಗಳಲ್ಲಿ ಪ್ರಯಾಣಿಕರಿಗೆ ಕರ್ತವ್ಯ ನಿರತ ಚಾಲನಾ ಸಿಬ್ಬಂದಿ ತಿಳುವಳಿಕೆ ನೀಡಬೇಕು ಹಾಗೂ ಪ್ರಯಾಣಿಕರ ಗಮನಕ್ಕೆ ಬರುವಂತೆ ಬಸ್‍ಗಳಲ್ಲಿ ಮಾಹಿತಿಯನ್ನು ಪ್ರದರ್ಶಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಪ್ರತಿದಿನ 6203 ಅನುಸೂಚಿಗಳಿಂದ 69,721 ಸುತ್ತುವಳಿಗಳ ಮೂಲಕ ಬಸ್ ಸೇವೆಯನ್ನು ಬಿಎಂಟಿಸಿ ಒದಗಿಸುತ್ತಿದ್ದು, ಸುಮಾರು 35.77 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.

ಎರಡನೇ ದಿನವಾದ ಇಂದು ವಿಚಾರಣೆಗೆ  ಹಾಜರಾದಶಾಸಕಿ ಲಕ್ಷ್ಮೀಹೆಬ್ಬಾಳ್ಕರ್

ನವದೆಹಲಿ, ಸೆ.20- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಎರಡನೇ ದಿನವಾದ ಇಂದು ವಿಚಾರಣೆಗೆ  ಹಾಜರಾದರು.

ಡಿ.ಕೆ.ಶಿವಕುಮಾರ್ ಅವರ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ನಿನ್ನೆ ವಿಚಾರಣೆ ನಡೆದಿತ್ತು.

ಕೇವಲ ಮೌಖಿಕ ಹೇಳಿಕೆಗಳನ್ನು  ಒಪ್ಪದ ಇಡಿ ಅಧಿಕಾರಿಗಳು ದಾಖಲೆಗಳ ಸಹಿತ ಹಾಜರಾಗುವಂತೆ ಸೂಚಿಸಿದ್ದರು. ಹಾಗಾಗಿ  ಇಂದು ಎಲ್ಲಾ ದಾಖಲೆಗಳ ಜತೆ ಲಕ್ಷ್ಮೀಹೆಬ್ಬಾಳ್ಕರ್ ಸುಮಾರು 12 ಗಂಟೆ ವೇಳೆಗೆ ಇಡಿ ಕಚೇರಿಗೆ ಆಗಮಿಸಿದರು.

ಲಕ್ಷ್ಮೀಹೆಬ್ಬಾಳ್ಕರ್ ಅವರ ಆಸ್ತಿ ಕೂಡ ದಿಢೀರ್ ಏರಿಕೆಯಾಗಿದೆ. ಈ ಹಿಂದಿನ ಸರ್ಕಾರದಲ್ಲಿ ಎಲ್‍ಇಡಿ ಬಲ್ಬ್ ಅಳವಡಿಕೆ, ಬಳ್ಳಾರಿ ಪವರ್ ಪ್ಲಾಂಟೇಷನ್ ಸೇರಿದಂತೆ ಹಲವಾರು ವ್ಯವಹಾರಗಳನ್ನು ಲಕ್ಷ್ಮೀಹೆಬ್ಬಾಳ್ಕರ್ ಮಾಡಿದ್ದಾರೆ. ಇದಕ್ಕೆ ಬಂಡವಾಳ ಹೂಡಿಕೆ ಕುರಿತಂತೆ ಸಾಕಷ್ಟು ಅನುಮಾನಗಳಿದ್ದು, ಜಾರಿ ನಿರ್ದೇಶನಾಲಯ ಇವೆಲ್ಲವುಗಳ ಸಮಗ್ರ ವಿಚಾರಣೆ ಕೈಗೆತ್ತಿಕೊಂಡಿದೆ.

ಕೋಟ್ಯಂತರ ರೂ. ವ್ಯವಹಾರ ಮಾಡಲು ಬಂಡವಾಳ ಎಲ್ಲಿಂದ ಬಂತು. ಯಾವ ಮೂಲದಿಂದ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲಾಗಿದೆ ಎಂಬ ವಿಷಯಗಳ ಕುರಿತಂತೆ ಇಡಿ ಅಧಿಕಾರಿಗಳು ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ