ಬೆಂಗಳೂರು, ಸೆ.20- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೊನೆ ಅವಧಿಯ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಹಾಗೂ ಬಿಜೆಪಿ ನಡುವೆ ಮೇಯರ್ ಸ್ಥಾನ ಪಡೆಯಲು ಜಂಗಿಕುಸ್ತಿ ಆರಂಭವಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಅಧಿಕಾರ ಹಿಡಿಯಲಾಗದೆ ಪರಿತಪಿಸುತ್ತಿದ್ದ ಬಿಜೆಪಿ ಈ ಬಾರಿ ಶತಾಯಗತಾಯ ಮೇಯರ್ ಪಟ್ಟ ಗಿಟ್ಟಿಸಿಕೊಳ್ಳಲು ಕಸರತ್ತು ಶುರು ಮಾಡಿದೆ.
ಇದೇ 27ರಂದು ನಡೆಯಲಿರುವ ಚುನಾವಣೆಯಲ್ಲಿ ಮೇಯರ್ ಸ್ಥಾನ ಗಿಟ್ಟಿಸಲು ಕನಿಷ್ಠ 129 ಮತಗಳ ಅವಶ್ಯಕತೆ ಇದ್ದು, ಈಗಾಗಲೇ 125 ಸಂಖ್ಯಾಬಲ ಹೊಂದಿರುವ ಬಿಜೆಪಿ ಏಳು ಮಂದಿ ಪಕ್ಷೇತರರಲ್ಲಿ ನಾಲ್ಕು ಮಂದಿಯನ್ನು ಹೈಜಾಕ್ ಮಾಡಿದೆ.
ಪಕ್ಷೇತರ ಸದಸ್ಯರಾದ ಗುಂಡಣ್ಣ, ರಮೇಶ್‍ರೆಡ್ಡಿ, ಗಾಯಿತ್ರಿ ಮತ್ತು ಆನಂದ್‍ಕುಮಾರ್ ಅವರುಗಳ ಮೊಬೈಲ್ ಕೂಡ ಸ್ವಿಚ್‍ಆಫ್ ಆಗಿದೆ.
ನಗರದ ಪ್ರಭಾವಿ ಬಿಜೆಪಿ ಶಾಸಕರೊಬ್ಬರು ನಾಲ್ವರು ಪಕ್ಷೇತರರನ್ನು ಖಾಸಗಿ ರೆಸಾರ್ಟ್‍ಗೆ ಕರೆದೊಯ್ದು ಇಟ್ಟುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ನಾಲ್ಕು ಮಂದಿಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹುದ್ದೆ ಆಮಿಷ ಒಡ್ಡಲಾಗಿದ್ದು, 27ರಂದು ಸೀದಾ ಅಜ್ಞಾತ ಸ್ಥಳದಿಂದ ಬಿಬಿಎಂಪಿ ಕಚೇರಿಗೆ ಬಂದು ಬಿಜೆಪಿ ಮೇಯರ್ ಅಭ್ಯರ್ಥಿಗೆ ಮತ ಚಲಾಯಿಸುವರೆಂಬುದು ಖಚಿತವಾಗಿದೆ.
ಪ್ರತಿತಂತ್ರ:
ಕಳೆದ ನಾಲ್ಕು ವರ್ಷಗಳಿಂದ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ಸಹಕಾರದಿಂದ ಮೇಯರ್ ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿಯೂ ಮೇಯರ್ ಪಟ್ಟ ಉಳಿಸಿಕೊಳ್ಳಲು ಪ್ರತಿತಂತ್ರ ರೂಪಿಸುತ್ತಿದೆ.
ನಗರದಲ್ಲಿರುವ ಶಾಸಕರು, ಜೆಡಿಎಸ್ ಸದಸ್ಯರು, ರಾಜ್ಯಸಭಾ ಸದಸ್ಯರು ಹಾಗೂ ಉಳಿದ ಮೂವರು ಪಕ್ಷೇತರ ಸದಸ್ಯರನ್ನು ಸೇರಿಸಿಕೊಂಡು ಬಿಜೆಪಿ ವಿರುದ್ಧ ಪ್ರತಿತಂತ್ರ ಹೆಣೆಯಲು ಷಡ್ಯಂತ್ರ ರೂಪಿಸುತ್ತಿದ್ದಾರೆ.
ಇದೇ 23ರಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದ್ದು, ಅನರ್ಹಗೊಂಡಿರುವ ಶಾಸಕರ ಬೆಂಬಲಿಗ ಬಿಬಿಎಂಪಿ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವುದು ಹಾಗೂ ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಗಂಭೀರ ಚರ್ಚೆ ನಡೆಸಲಿದ್ದಾರೆ.
ಕೊನೆ ಅವಧಿಯ ಮೇಯರ್ ಸ್ಥಾನ ಗಿಟ್ಟಿಸಲು ಕಾಂಗ್ರೆಸ್- ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮೇಯರ್ ಪಟ್ಟವೂ ಬಿಜೆಪಿಗೆ ದಕ್ಕಲಿದೆಯೋ ಅಥವಾ ಕಾಂಗ್ರೆಸ್ ತಂತ್ರ ಯಶಸ್ವಿಯಾಗಿ ಆ ಪಕ್ಷಕ್ಕೆ ಪಟ್ಟ ಸಿಗುವುದೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.