ಕೆಎಸ್‍ಆರ್‍ಟಿಸಿಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ

ಬೆಂಗಳೂರು, ಸೆ.20- ಕೆಎಸ್‍ಆರ್‍ಟಿಸಿ ದಸರಾ ಸಂದರ್ಭದಲ್ಲಿ ಗಿರಿ ದರ್ಶಿನಿ, ಜಲ ದರ್ಶಿನಿ, ದೇವ ದರ್ಶಿನಿ ಎಂಬ ಮೂರು ಪ್ಯಾಕೇಜ್‍ಗಳನ್ನು ಘೋಷಣೆ ಮಾಡಿದೆ. ದಸರಾಗೆ ಆಗಮಿಸುವ ಪ್ರವಾಸಿಗರು ಈ ಪ್ಯಾಕೇಜ್‍ಗಳ ಉಪಯೋಗ ಪಡೆದುಕೊಂಡು ವಿವಿಧ ಪ್ರದೇಶಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ಮೈಸೂರು ದಸರಾ ಪ್ರಯುಕ್ತ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಕೆಎಸ್‍ಆರ್‍ಟಿಸಿ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಮೈಸೂರು ಮತ್ತು ಸುತ್ತಮುತ್ತಲಿನ ಸ್ಥಳಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಸೆ.29ರಿಂದ ಅ.13ರ ತನಕ ಈ ಪ್ಯಾಕೇಜ್ ಮೂಲಕ ಜನರು ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ವಯಸ್ಕರಿಗೆ, ಮಕ್ಕಳಿಗೆ ಈ ಪ್ಯಾಕೇಜ್‍ನಲ್ಲಿ ಪ್ರತ್ಯೇಕ ದರಗಳನ್ನು ನಿಗದಿ ಮಾಡಲಾಗಿದೆ.

ಕೆಎಸ್‍ಆರ್‍ಟಿಸಿಯ ಐರಾವತ ಕ್ಲಬ್ ಕ್ಲಾಸ್ ವಾಹನಗಳ ಮೂಲಕ ಈ ಪ್ಯಾಕೇಜ್ ಆರಂಭವಾಗಲಿದ್ದು, ಒಂದು ದಿನದ ಪ್ರವಾಸಿ ಪ್ಯಾಕೇಜ್ ಇದಾಗಿದೆ.

ಮಡಿಕೇರಿ ಪ್ಯಾಕೇಜ್ ಮೂಲಕ ಜನರು ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ರಾಜಾಸೀಟ್, ಅಬ್ಬಿಫಾಲ್ಸ್ ಭೇಟಿ ನೀಡಬಹುದು. ವಯಸ್ಕರಿಗೆ 1200 ಮತ್ತು ಮಕ್ಕಳಿಗೆ 900 ರೂ. ದರವನ್ನು ನಿಗದಿ ಮಾಡಲಾಗಿದೆ.

ಬಂಡೀಪುರ ಪ್ಯಾಕೇಜ್‍ನಲ್ಲಿ ಸೋಮನಾಥಪುರ, ತಲಕಾಡು, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಹಾಗೂ ನಂಜನಗೂಡು ಒಳಗೊಂಡಿದೆ. ವಯಸ್ಕರಿಗೆ 1000 ಹಾಗೂ ಮಕ್ಕಳಿಗೆ 750 ರೂ. ದರವನ್ನು ನಿಗದಿ ಪಡಿಸಲಾಗಿದೆ.

ಶಿಂಷಾ ಪ್ಯಾಕೇಜ್‍ನಲ್ಲಿ  ಶಿವನಸಮುದ್ರ, ಶ್ರೀರಂಗಪಟ್ಟಣ, ರಂಗನತಿಟ್ಟು, ಬಲಮುರಿ ಫಾಲ್ಸ್, ಕೆಆರ್‍ಎಸ್‍ಗೆ ಭೇಟಿ ನೀಡಬಹುದಾಗಿದೆ. ವಯಸ್ಕರಿಗೆ 800 ರೂ. ಮತ್ತು ಮಕ್ಕಳಿಗೆ 600 ರೂ. ದರವನ್ನು ನಿಗದಿ ಮಾಡಲಾಗಿದೆ ಎಂದು ಸಂಸ್ಥೆ ಪ್ರಕಟಣೆ ಹೊರಡಿಸಿದೆ.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ