ಮುಂಬೈ/ಅಹಮದಾಬಾದ್/ಪಣಜಿ, ಸೆ.19- ದಕ್ಷಿಣ ಭಾರತ ಮತ್ತು ಉತ್ತರ ಭಾರತದಲ್ಲಿ ಭಾರೀ ಜಲ ಸಂಕಷ್ಟ ಉಂಟುಮಾಡಿದ್ದ ವರುಣನ ಆರ್ಭಟ ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾ ರಾಜ್ಯಗಳಲ್ಲಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಮೂರು ರಾಜ್ಯಗಳ ಪ್ರಮುಖ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಸಂಭವಿಸಲಿದೆ ಎಂದು ಐಎಂಡಿ ಕಟ್ಟೆಚ್ಚರ ನೀಡಿದೆ. ಈ ಹಿನ್ನೆಲೆಯಲ್ಲಿ ಎದುರಾಗಬಹುದಾದ ಪರಿಸ್ಥಿತಿ ನಿಭಾಯಿಸಲು ರಕ್ಷಣಾ ಕಾರ್ಯಕರ್ತರು ಸಜ್ಜಾಗಿದ್ದಾರೆ.
ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧೆಡೆ ಈಗಾಗಲೇ ಭಾರೀ ಮಳೆ ಸುರಿಯುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಮಳೆಯಿಂದ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡು ಜನಜೀವನ ಏರುಪೇರಾಗಿದೆ.
ಗುಜರಾತ್ ಮತ್ತು ಗೋವಾದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದ್ದು, ರೆಡ್ ಅಲಟ್ರ ಘೋಷಿಸಲಾಗಿದೆ. ಕೆಲವೆಡೆ ಈಗಾಗಲೇ ಮಳೆಯ ಆರ್ಭಟ ಆರಂಭವಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ದಳಗಳು ಸಂಭವಿಸಬಹುದಾದ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿವೆ.