ನವದೆಹಲಿ, ಸೆ.18-ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಉಂಟು ಮಾಡಿರುವ ಉತ್ತರ ಪ್ರದೇಶದ ಅಯೋಧ್ಯೆ ವಿವಾದದ ಅಂತಿಮ ತೀರ್ಪನ್ನು ಡಿಸೆಂಬರ್ ಅಂತ್ಯದೊಳಗೆ ಪ್ರಕಟಿಸಲು ಸುಪ್ರೀಂಕೋರ್ಟ್ ಪ್ರಕಟಿಸಿದೆ.
ಅಯೋಧ್ಯೆಯ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದ ಅನೇಕ ವರ್ಷಗಳಿಂದಲೂ ಇತ್ಯರ್ಥ ಕಾಣದೆ ನೆನೆಗುದಿಗೆ ಬಿದ್ದಿದೆ.
ಈಗ ನಡೆಯುತ್ತಿರುವ ಅಯೋಧ್ಯೆ ಪ್ರಕರಣದ ಎಲ್ಲಾ ವಿಚಾರಣೆಗಳನ್ನು ಈ ವರ್ಷದ ಅಕ್ಟೋಬರ್ ಒಳಗೆ ಪೂರ್ಣಗೊಳಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದಲ್ಲಿ ಸಂವಿಧಾನ ಪೀಠ ನಿರ್ಧರಿಸಿದೆ.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಭೂ ವಿವಾದ ಅನೇಕ ವರ್ಷಗಳಿಂದಲೂ ಇತ್ಯರ್ಥವಾಗಿಲ್ಲ. ಸುದೀರ್ಘ ಕಾನೂನು ಸಮರ ಮುಂದುವರೆದಿದೆ.
ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸುಪ್ರೀಂಕೋರ್ಟ್, ನಿವೃತ್ತ ನ್ಯಾಯಮೂರ್ತಿ ಖಲೀಫ್ವುಲ್ಲಾ ನೇತೃತ್ವದಲ್ಲಿ ರಚಿಸಿದ್ದ ತ್ರಿಸದಸ್ಯರ ಸಂಧಾನ ಪೀಠ ಅನೇಕ ದಿನಗಳ ಕಾಲ ನಡೆಸಿದ ಮಧ್ಯಸ್ಥಿಕೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ಮುಂದುವರೆಸುತ್ತಾ ಬಂದಿದೆ.
ಈ ವಿವಾದದ ಮೂರು ಪ್ರಮುಖ ಪಕ್ಷಗಾರರಾದ ರಾಮಲಲ್ಲಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಮಂಡಲಿ ಪರ ವಕೀಲರು ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ತಮ್ಮ ಸುದೀರ್ಘ ವಾದ, ಪ್ರತಿವಾದಗಳನ್ನು ಮಂಡಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಾಮರ್ಶಿಸುತ್ತಿರುವ ಪೀಠವು ಅಕ್ಟೋಬರ್ ಅಂತ್ಯದೊಳಗೆ ಶತಾಯಗತಾಯ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಡಿಸೆಂಬರ್ ವೇಳೆಗೆ ಅಂತಿಮ ನಿರ್ಧಾರ ಪ್ರಕಟಿಸಲು ನಿರ್ಧರಿಸಿದೆ.
ಇನ್ನೊಂದೆಡೆ ಬಾಬರಿ ಮಸೀದಿ ಧ್ವಂಸ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆನ್ನಲಾದ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡರಾದ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಕೇಂದ್ರದ ಮಾಜಿ ಸಚಿವರಾದ ಡಾ.ಮುರಳಿ ಮನೋಹರ್ ಜೋಷಿ, ಉಮಾಭಾರತಿ ಮತ್ತಿತರರ ವಿರುದ್ಧದ ಕ್ರಿಮಿನಲ್ ಪಿತೂರಿ ಆರೋಪಗಳು ಸಹ ಇತ್ಯರ್ಥವಾಗಲಿದೆ.
ಒಟ್ಟಾರೆ ಅಯೋಧ್ಯೆ-ಬಾಬರಿ ಮಸೀದಿಗೆ ಸಂಬಂಧಪಟ್ಟ ಎಲ್ಲ ವಿವಾದ ಮತ್ತು ವ್ಯಾಜ್ಯಗಳು ಡಿಸೆಂಬರ್ ವೇಳೆಗೆ ಇತ್ಯರ್ಥಗೊಳ್ಳುವ ನಿರೀಕ್ಷೆ ಇದ್ದು, ಹೊರಬೀಳಬಹುದಾದ ತೀರ್ಪು ದೇಶಾದ್ಯಂತ ಅಪಾರ ಕುತೂಹಲ ಕೆರಳಿಸಿದೆ.