ಸರಣಿ ಬಾಂಬ್ ಸ್ಪೋಟಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿ

Afghan police inspect the site of a bombing attack in Parwan province, where Afghan President Ashraf Ghani was speaking. The Taliban has claimed responsibility for the attack.

ಕಾಬೂಲ್, ಸೆ.18- ತಾಲಿಬಾನ್ ಉಗ್ರಗಾಮಿಗಳ ಸರಣಿ ದಾಳಿಗಳಿಂದ ನಲುಗಿರುವ ಆಫ್ಘಾನಿಸ್ತಾನದಲ್ಲಿ ಚುನಾವಣೆಗೆ ಮುನ್ನವೇ ನಡೆದ ಭಾರೀ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಮಂದಿ ಬಲಿಯಾಗಿ ಅನೇಕರು ತೀವ್ರ ಗಾಯಗೊಂಡಿದ್ದಾರೆ.

ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ರಾಜಧಾನಿ ಕಾಬೂಲ್ ಸಮೀಪದ ಪರ್ವನ್ ಪ್ರದೇಶದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 26 ಮಂದಿ ಮೃತಪಟ್ಟು 45ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದಾರೆ.

ಇದಾದ ಒಂದು ಗಂಟೆ ಬಳಿಕ ಕಾಬೂಲ್ ಮಧ್ಯಭಾಗದಲ್ಲಿ ಅಮೆರಿಕ ರಾಯಭಾರಿ ಕಚೇರಿ ಇರುವ ಸ್ಥಳದ ಬಳಿ ಬಾಂಬ್ ಸ್ಫೋಟಗೊಂಡು 22 ಮಂದಿ ಹತರಾದರು. ಈ ವಿಧ್ವಂಸಕ ಕೃತ್ಯದಲ್ಲಿ 18ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಈ ಎರಡು ಬಾಂಬ್ ದಾಳಿಗಳನ್ನು ತಾಲಿಬಾನ್ ಉಗ್ರರು ನಡೆಸಿರುವುದು ದೃಢಪಟ್ಟಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ತಾಲಿಬಾನ್ ಉಗ್ರರ ಜತೆ ಮಾತುಕತೆ ಪ್ರಕ್ರಿಯೆ ಸತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ನಂತರ ಆಫ್ಘಾನಿಸ್ತಾನದಲ್ಲಿ ಅದರಲ್ಲೂ ಅಮೆರಿಕ ಸೇನಾ ನೆಲೆಗಳ ಮೇಲೆ ಭಾರೀ ದಾಳಿ ನಡೆಸುವುದಾಗಿ ತಾಲಿಬಾನ್ ಗಂಭೀರ ಎಚ್ಚರಿಕೆ ನೀಡಿತ್ತು.

ಅದಾದ ಮರುದಿನದಿಂದಲೇ ಕಣಿವೆ ರಾಷ್ಟ್ರದಲ್ಲಿ ತಾಲಿಬಾನ್ ಬಂಡುಕೋರರ ಅಟ್ಟಹಾಸ ಮತ್ತು ಹಿಂಸಾಚಾರ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ