ನವದೆಹಲಿ, ಸೆ.18- ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧತಿ ನಂತರ ಭಾರತ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿದೆ.
ಇದೇ ವೇಳೆ ಅಮೆರಿಕಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ನಡುವೆ ಯಾವುದೇ ಭೇಟಿಗಳಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ನಿನ್ನೆಯಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ ಮತ್ತು ಭಾರತದ ಪ್ರಧಾನಮಂತ್ರಿಗಳನ್ನು ಶೀಘ್ರದಲ್ಲಿಯೇ ಭೇಟಿಯಾಗುವುದಾಗಿ ಹೇಳಿದ್ದರು. ಆದರೆ, ಎಲ್ಲಿ , ಯಾವಾಗ ಭೇಟಿಯಾಗಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರ ಪ್ರಧಾನಮಂತ್ರಿಗಳ ನಡುವೆ ಯಾವುದೇ ರೀತಿಯ ಭೇಟಿಗಳ ಅವಕಾಶಗಳಿಲ್ಲ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ (ಯುಎನ್ಜಿಎ) ಉಭಯ ರಾಷ್ಟ್ರಗಳ ನಡುವೆ ಸಭೆ ನಡೆಯುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರಸ್ತುತ ಉಭಯ ರಾಷ್ಟ್ರಗಳ ನಡುವೆ ಇರುವ ವಾತಾವರಣವೇ ಎಲ್ಲದಕ್ಕೂ ಉತ್ತರ ನೀಡುತ್ತಿದೆ ಎಂದು ಹೇಳಿದ್ದಾರೆ.
ಕರ್ತಾಪುರ್ ಕಾರಿಡಾರ್ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಪರಿಹಾರಗೊಂಡಿವೆ. ಯೋಜನೆ ಪ್ರಸ್ತುತ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ನಿರೀಕ್ಷೆಯಂತೆಯೇ ಯೋಜನೆ ಸಾಗುತ್ತಿದೆ ಎಂದು ತಿಳಿಸಿದ್ದಾರೆ.