ಬೆಂಗಳೂರು, ಸೆ.18- ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ನಮಗೆ ಸಂಪೂರ್ಣವಾದ ನಂಬಿಕೆ ಇರುವುದರಿಂದ ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.
ಶ್ರೀ ಶೈಲ ಜಗದ್ಗುರುಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಪ್ರಧಾನಿ ಬಳಿ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯುವ ಅಗತ್ಯವಿಲ್ಲ. ರಾಜ್ಯಕ್ಕೆ ಸದ್ಯದಲ್ಲೇ ಕೇಂದ್ರದಿಂದ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಕರ್ನಾಟಕ ಮಾತ್ರವಲ್ಲದೆ ಏಳೆಂಟು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಯಾವ ರಾಜ್ಯಗಳಿಗೂ ಕೇಂದ್ರ ಸರ್ಕಾರ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಎಲ್ಲಾ ರಾಜ್ಯಗಳಿಗೂ ಒಂದೇ ಹಂತದಲ್ಲಿ ಆರ್ಥಿಕ ನೆರವು ಬಿಡುಗಡೆ ಮಾಡುವ ಸಂಭವವಿದೆ. ರಾಜ್ಯದ ವಸ್ತು ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ಈಗಾಗಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಬಂದು ಹೋಗಿದೆ. ತಂಡ ಸಂಬಂಧಪಟ್ಟವರಿಗೆ ವರದಿಯನ್ನು ನೀಡಿದೆ. ನಮ್ಮ ನಿರೀಕ್ಷೆಗೂ ಮೀರಿದ ಪರಿಹಾರ ಕೇಂದ್ರ ಸರ್ಕಾರದಿಂದ ಸಿಗಲಿದೆ.ಯಾರಿಗೂ ಅನುಮಾನ ಬೇಡ ಎಂದು ಮನವಿ ಮಾಡಿದರು.
ನೆರೆ ಪೀಡಿತ ಪ್ರದೇಶಗಳಲ್ಲಿ ಸರ್ಕಾರ ಸಮಾರೋಪಾದಿಯಲ್ಲಿ ಪರಿಹಾರ ಕೈಗೊಂಡಿದೆ. ಮನೆ ಕಟ್ಟಿಕೊಳ್ಳಲು ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಲಾಗಿದೆ. ಮನೆ ತಳಪಾಯಕ್ಕೆ ಒಂದು ಲಕ್ಷ ಸೇರಿದಂತೆ ರಾಜ್ಯ ಸರ್ಕಾರವೇ 5 ಲಕ್ಷ ಪರಿಹಾರ ನೀಡಲಿದೆ.ಆದರೆ, ಪ್ರತಿ ಪಕ್ಷಗಳು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೆರೆ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಹಾರ ನೀಡಲು ವಿಳಂಬ ಧೊರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ, ಕಾಂಗ್ರೆಸ್ ಪ್ರತಿಭಟನೆ ಮಾಡಲು ಮುಂದಾಗಿರುವುದಕ್ಕೆ ಗರಂ ಆದ ಯಡಿಯೂರಪ್ಪ, ಅವರಿಗೆ ಮಾಡಲು ಯಾವ ಕೆಲಸಗಳೂ ಇಲ್ಲ. ಹೀಗಾಗಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯ ವಾಡಿದರು.
ಕಾಂಗ್ರೆಸಿಗರು ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಪ್ರತಿಭಟನೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ. ಜನರಲ್ಲಿ ಗೊಂದಲ ಸೃಷ್ಟಿಸುವ ಕಾಂಗ್ರೆಸ್ನ ಪ್ರಯತ್ನ ಈಡೇರಿವುದಿಲ್ಲ ಎಂದು ತಿರುಗೇಟು ನೀಡಿದರು.
ಶ್ರೀ ಶೈಲ ಜಗದ್ಗುರುಗಳು ನನ್ನನ್ನು ಭೇಟಿ ಮಾಡಲು ಅಪೇಕ್ಷಿಸಿದ್ದರು. ಹೀಗಾಗಿ ನಾನೇ ಖುದ್ದು ಅವರನ್ನು ಭೇಟಿ ಮಾಡಿದ್ದೇನೆ. ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ನೀಡಲು ವೀರಶೈವ ಸಮುದಾಯದ ಮಹಿಳೆಯರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಕೊಟ್ಟಿದ್ದಾರೆ. ಅದನ್ನು ನಾನು ಶ್ರೀಗಳಿಂದ ಸ್ವೀಕರಿಸಿದ್ದೇನೆ.
ಶ್ರೀ ಶೈಲದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ ಎಂದು ಶ್ರೀಗಳು ನನ್ನ ಗಮನಕ್ಕೆ ತಂದಿದ್ದಾರೆ. ಶೀಘ್ರವೇ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ಶ್ರೀ ಶೈಲ ಪೀಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೆರೆ ಪೀಡಿತ ಪ್ರದೇಶಗಳಲ್ಲಿ ನಾವು ನೂರು ಮನೆಗಳನ್ನು ನಿರ್ಮಿಸಿಕೊಡಲಿದ್ದೇವೆ. ಜನರು ಬಂಗಾರ ಸೇರಿದಂತೆ ಮತ್ತಿತರ ವಸ್ತುಗಳನ್ನು ಮಾರಿ ಸಂತ್ರಸ್ತರಿಗೆ ಸೂರು ಒದಗಿಸಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆ ಯಾಗುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ಅಲ್ಲಿಂದ ಹಣ ಬಂದ ನಂತರ ನಾವೂ ಕೂಡ ಮನೆ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ಕೊಡಲಿದ್ದೇವೆ. ಸುಮಾರು 650 ಗ್ರಾಂ ಬಂಗಾರ ನಮ್ಮ ಬಳಿ ಸಂಗ್ರಹಣೆಯಾಗಿದೆ. ಇದನ್ನು ಮಾರಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲಿದ್ದೇವೆ ಎಂದು ತಿಳಿಸಿದರು.
ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಮಠಮಾನ್ಯಗಳು ಮುಂದೆ ಬರಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮನವಿ ಮಾಡಿದ್ದರು. ನಾವೂ ಕೂಡ ನಮ್ಮ ಕೈಲಾದಷ್ಟು ಸೇವೆ ಮಾಡಬೇಕೆಂದು ತೀರ್ಮಾನಿಸಿದ್ದೆವು.ಭಕ್ತರು ನಗದು ಮತ್ತು ಬಂಗಾರವನ್ನು ದೇಣಿಗೆಯಾಗಿ ನೀಡಿದ್ದಾರೆ. ಆಭರಣ ಮಾರಿ ಅದರಿಂದ ಬಂದ ಹಣದಿಂದ ಸರ್ಕಾರ ಎಲ್ಲಿ ಸೂಚನೆ ಕೊಡುತ್ತದೆಯೋ ಅಂತಹ ಕಡೆ ಮನೆ ನಿರ್ಮಿಸಿಕೊಡುವುದಾಗಿ ಶ್ರೀಗಳು ತಿಳಿಸಿದರು.