ಆರ್ಥಿಕ ಹಿಂಜರಿತ ಇಡೀ ಜಗತ್ತಿನಲ್ಲೇ ಇದೆ-ಸಚಿವ ಜಗದೀಶ್‍ಶೆಟ್ಟರ್

ತುಮಕೂರು, ಸೆ.18- ಕೈಗಾರಿಕಾ ವಲಯದಲ್ಲಿ ಉದ್ಯೋಗಾವಕಾಶ ಸೃಷ್ಠಿ ಹಾಗೂ ಆರ್ಥಿಕ ಮಟ್ಟ ಚೇತರಿಕೆಗೆ ಕ್ರಮ ಕೈಗೊಳ್ಳುವ ಸಂಬಂಧ ಚಿಂತನೆ ನಡೆಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‍ಶೆಟ್ಟರ್ ತಿಳಿಸಿದ್ದಾರೆ.

ಆರ್ಥಿಕ ಹಿಂಜರಿತ ಕೇವಲ ನಮ್ಮ ರಾಜ್ಯ, ರಾಷ್ಟ್ರಕ್ಕೆ ಮಾತ್ರ ಆಗಿಲ್ಲ. ಇಡೀ ಜಗತ್ತಿನಲ್ಲೇ ಇದೆ. ಆದರೆ, ಇದರಿಂದ ಆಟೋ ಮೊಬೈಲ್ ಕ್ಷೇತ್ರಕ್ಕೆ ಭಾರೀ ಹಿನ್ನಡೆಯಾಗಿರುವುದು ಸತ್ಯ. ಈ ಎಲ್ಲದರ ಬಗ್ಗೆ ಅಧ್ಯಯನ ನಡೆಸಿ ಪುನಃಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಸಿದ್ದಗಂಗಾ ಮಠಕ್ಕೆ ತೆರಳಿ ಡಾ. ಶ್ರೀೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೈಗಾರಿಕಾ ಕ್ಷೇತ್ರದಲ್ಲಿ ಕೆಲವು ವಲಯಗಳಿಗೆ ಆರ್ಥಿಕ ಹಿಂಜರಿತ ಪರಿಣಾಮ ಬೀರಿದೆ.ಇಡೀ ಜಗತ್ತಿಲ್ಲೇ ಆಟೋಮೊಬೈಲ್ ಕ್ಷೇತ್ರದ ಮೇಲೆ ಇದರ ಪರಿಣಾಮ ಬೀರಿದೆ ಎಂದು ತಿಳಿಸಿದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಸಂಬಂಧ ಅಧ್ಯಯನ ನಡೆಸುತ್ತಿದ್ದು, ಆದಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಆದ್ಯತೆ ನೀಡುವಂತೆ ಕೈಗಾರಿಕೋದ್ಯಮಿಗಳಿಗೆ ಒತ್ತಾಯ ಮಾಡಲಾಗುವುದು ಎಂದರು.

ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಯಾರೂ ಸಹ ಹೇಳಿಕೆಯನ್ನೂ ಕೊಟ್ಟಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಸ್ಪೃಶ್ಯತೆ ಅಂತ್ಯವಾಗಲಿ:
ಅಭಿವೃದ್ದಿ ಕಾರ್ಯದ ವಿಚಾರವಾಗಿ ಬಂದ ಸಂಸದರನ್ನೇ ಗ್ರಾಮ ಪ್ರವೇಶಕ್ಕೆ ಅವಕಾಶ ನೀಡದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಗತ್ತು ಬದಲಾವಣೆಯಾಗಿದೆ. ಇಂಥ ಸಂದರ್ಭದಲ್ಲಿ ಸ್ಪೃಶ್ಯ, ಅಸ್ಪೃಶ್ಯತೆ ಎಂಬುದು ಅಂತ್ಯವಾಗಬೇಕು ಎಂದು ಸಚಿವ ಜಗದೀಶ್‍ಶೆಟ್ಟರ್ ಹೇಳಿದರು.

ಜಗತ್ತು ಬದಲಾವಣೆಯಾಗತ್ತಿರುವಾಗ ಇಂತಹ ಮೌಢ್ಯತೆಗಳು ಜೀವಂತವಾಗಿರುವುದು ದುರ್ದೈವ. 12ನೇ ಶತಮಾನದಲ್ಲಿ ಬಸವಣ್ಣನವರು ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆಸಿದ್ದರು. ಬಸವಣ್ಣನವರ ಮಾದರಿಯಲ್ಲೇ ಅಂಬೇಡ್ಕರ್, ಮಹಾತ್ಮಗಾಂಧೀಜಿಯವರು ಸಹ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಆದರೂ ಸಹ 21ನೇ ಶತಮಾನದಲ್ಲೂ ಈ ಅಸ್ಪೃಶ್ಯತೆ ಜೀವಂತವಾಗಿರುವುದು ತಲೆತಗ್ಗಿಸುವಂತಹ ಸಂಗತಿ, ಇದು ಖಂಡನೀಯ ಎಂದರು.

ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಮುಖಂಡರಾದ ಶಿವಪ್ರಸಾದ್, ರವಿ ಹೆಬ್ಬಾಕ, ಕೊಪ್ಪಲ್ ನಾಗರಾಜು, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್, ರುದ್ರೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಕೆಐಎಡಿಬಿ ಸಿಇಒ ಬಸವರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ