ಬೆಂಗಳೂರು, ಸೆ.18- ಬಿಬಿಎಂಪಿ ಉಪಮೇಯರ್ ಭದ್ರೇಗೌಡ ಅವರು ಇಂದು ಗೌಜು-ಗದ್ದಲದ ನಡುವೆ 2012-13ರಿಂದ 2014-15ನೆ ಸಾಲಿನ ಮೂರು ವರ್ಷಗಳವರೆಗಿನ ಆಡಳಿತ ವರದಿಯನ್ನು ಮಂಡಿಸಿದರು.
ಪಾಲಿಕೆಯ 54ನೆ ಉಪ ಮಹಾಪೌರನಾಗಿ ಈ ಆಡಳಿತ ವರದಿಯನ್ನು ಮಂಡಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಆಡಳಿತ ವರದಿ ತಯಾರಿಕೆಗಾಗಿ ಮಾಹಿತಿ ನೀಡಲು ಕೇಂದ್ರ ಮತ್ತು ವಲಯ ಅಧಿಕಾರಿಗಳಿಗೆ ಹಲವಾರು ಬಾರಿ ಸೂಚಿಸಿದ್ದರೂ ಸಹ ಅವರುಗಳು ಮಾಹಿತಿಯನ್ನು ಸಕಾಲದಲ್ಲಿ ಒದಗಿಸದೆ ಇದ್ದುದರಿಂದ 2012ನೆ ಸಾಲಿನಿಂದ ಆಡಳಿತ ವರದಿ ಬಾಕಿ ಉಳಿಯಲು ಕಾರಣವಾಗಿತ್ತು ಎಂದು ಹೇಳಿದರು.
ಎಲ್ಲ ಕಚೇರಿಗಳಿಂದ ಮಾಹಿತಿಯನ್ನು ಕ್ರೋಢೀಕರಿಸಿ 2012 ರಿಂದ 2018ನೆ ಸಾಲಿನವರೆಗೆ ಒಟ್ಟು ಆರು ವರ್ಷಗಳ ಆಡಳಿತ ವರದಿ ಮಂಡಿಸಲು ಉದ್ದೇಶಿಸಿದ್ದೆ. ಆದರೆ, ಕೆಲವು ಕಚೇರಿಗಳಿಂದ ಮಾಹಿತಿ ಲಭ್ಯವಾಗದ ಕಾರಣ ಪ್ರಸ್ತುತ 2012 ರಿಂದ 2014-15ನೆ ಸಾಲಿನ ಮೂರು ವರ್ಷಗಳ ವರದಿಯನ್ನು ತಯಾರಿಸಿ ಮಂಡಿಸಿದ್ದೇನೆ ಎಂದು ಹೇಳಿದರು.
ಪ್ರತಿ ವರ್ಷದ ಆಡಳಿತ ವರದಿಯು ಆಯಾ ಕ್ಯಾಲೆಂಡರ್ ವರ್ಷದ ಏ.1ರಿಂದ ಪ್ರಾರಂಭವಾಗಿ ಮುಂದಿನ ಕ್ಯಾಲೆಂಡರ್ ವರ್ಷದ ಮಾ.31ರ ಅಂತ್ಯದ ಅವಧಿಯವರೆಗಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಸಂಬಂಧ ಹೊರತಂದಿರುವ ಪುಸ್ತಕ ಅನುಬಂಧ-1ರಲ್ಲಿ ಆಡಳಿತ ವರದಿ ಹಾಗೂ ಅನುಬಂಧ-2ರಲ್ಲಿ ಕಾಮಗಾರಿ ವಿವರಗಳನ್ನು ಒಳಗೊಂಡಿದ್ದು, ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರತ್ಯೇಕವಾಗಿ ತಯಾರಿಸಲಾಗಿದೆ.
ಆಡಳಿತ ವರದಿಯು ಪಾಲಿಕೆಯ 35 ಇಲಾಖೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರಗಳನ್ನು ಒಳಗೊಂಡಿದ್ದು, ಸಂಪನ್ಮೂಲ ಕ್ರೋಢೀಕರಣ, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ, ಹೊಸ ಯೋಜನೆಗಳನ್ನು ಜಾರಿಗೆ ತರಲು ಮತ್ತು ಅದಕ್ಕೆ ತಕ್ಕಂತೆ ಸಿಬ್ಬಂದಿಗಳ ನಿಯೋಜನೆ ಮಾಡುವ ಸಂಬಂಧ ಆಡಳಿತ ವರದಿಯಲ್ಲಿನ ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರಗಳು ಅಗತ್ಯವಾಗುತ್ತವೆ.
ಅಲ್ಲದೆ, ಆಡಳಿತ ಯಂತ್ರದ ನಿರ್ವಹಣೆಗೆ, ಹಿಂದಿನ ಅವಧಿಯಲ್ಲಾದ ಪ್ರಗತಿಯನುಸಾರ ಆರ್ಥಿಕ ಪರಿಸ್ಥಿತಿಯನ್ನು ರೂಪಿಸಲು ಮತ್ತು ನಗರದಲ್ಲಿ ಪ್ರಮುಖ ಯೋಜನೆಗಳ ಜಾರಿಗೆ ಈ ವರದಿಯ ಅಂಕಿ-ಅಂಶಗಳು ಸಹಕಾರಿಯಾಗುತ್ತವೆ.
ಈ ಆಡಳಿತ ವರದಿ ಬಗ್ಗೆ ಪಾಲಿಕೆ ಸದಸ್ಯರು ಚರ್ಚೆ ಸಮಯದಲ್ಲಿ ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆ-ಸೂಚನೆಗಳನ್ನು ನೀಡಬೇಕೆಂದು ಭದ್ರೇಗೌಡ ಮನವಿ ಮಾಡಿದರು.
ಈ ಆಡಳಿತ ವರದಿ ತಯಾರಿಕೆಗೆ ಮತ್ತು ಮಂಡನೆಗೆ ಸಹಕರಿಸಿದ ಮೇಯರ್ ಗಂಗಾಂಬಿಕೆ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಅಪರ ಆಯುಕ್ತ ರಂದೀಪ್, ಜಂಟಿನಿರ್ದೇಶಕ ಮಂಗಳ್‍ದಾಸ್ ಮತ್ತು ಬಿಬಿಎಂಪಿ ಸದಸ್ಯರು, ಆಯುಕ್ತರು ಹಾಗೂ ಎಲ್ಲ ಅಧಿಕಾರಿಗಳಿಗೆ ಭದ್ರೇಗೌಡ ಧನ್ಯವಾದ ಸಲ್ಲಿಸಿದರು.