ವರದಿ ಮಂಡನೆಗೆ ಮುಂದಾಗುತ್ತಿದ್ದಂತೆ ಬಿಜೆಪಿಯವರು ತೀವ್ರ ವಿರೋಧ

ಬೆಂಗಳೂರು, ಸೆ.18- ಪಾಲಿಕೆ ಸಭೆಯಲ್ಲಿಂದು ಉಪ ಮಹಾಪೌರ ಭದ್ರೇಗೌಡ ಅವರು 2012-13ರಿಂದ ಮೂರು ವರ್ಷಗಳ ಆಡಳಿತ ವರದಿ ಮಂಡನೆಗೆ ಮುಂದಾಗುತ್ತಿದ್ದಂತೆ ಬಿಜೆಪಿಯವರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜ್ ಮಾತನಾಡಿ, ಆಡಳಿತ ವರದಿ ಮಂಡನೆ ಮಾಡುತ್ತಿರುವುದು ಬಿಜೆಪಿ ಅವಧಿಯದ್ದು. ಹಗರಣಗಳು ಬಯಲಿಗೆ ಬರುತ್ತವೆ ಎಂಬ ಕಾರಣಕ್ಕೆ ಅಡ್ಡಿ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.

ಮೇಯರ್ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಈಗ ಆಡಳಿತ ವರದಿ ಮಂಡನೆ ಮಾಡುವುದು ಸರಿಯಲ್ಲ ಎಂದು ಬಿಜೆಪಿಯವರು ಟೀಕಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಮೇಯರ್ ಭದ್ರೇಗೌಡ ವರದಿ ಮಂಡನೆ ದಿನಾಂಕ ನಿಗದಿ ಮಾಡಿದ್ದಾಗ ಮೇಯರ್ ಚುನಾವಣೆ ಘೋಷಣೆಯಾಗಿರಲಿಲ್ಲ. ಹಾಗಾಗಿ ವರದಿ ಮಂಡನೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕೋರಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರೇ ಆದ ಗುಣಶೇಖರ್ ಕೂಡ ಧ್ವನಿ ಎತ್ತಿ ಚುನಾವಣೆ ಘೋಷಣೆಯಾದ ಬಳಿಕ ಆಡಳಿತ ವರದಿ ಮಂಡನೆ ಮಾಡುವ ಹಾಗಿಲ್ಲ ಎಂದು ಹೇಳಿದುದು ಕಾಂಗ್ರೆಸ್‍ನವರಿಗೆ ಇರಿಸು-ಮುರಿಸುಂಟಾಗುವಂತಾಯಿತು.

ಗುಣಶೇಖರ್ ಅನರ್ಹ ಶಾಸಕ ರೋಷನ್ ಬೇಗ್ ಬೆಂಬಲಿತರಾಗಿದ್ದು, ವರದಿ ಮಂಡನೆಗೆ ವಿರೋಧಿಸಿರಬಹುದು ಎಂಬ ಗುಸು ಗುಸು ಕೇಳಿಬಂದಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ