ಬೆಂಗಳೂರು, ಸೆ.18-ಚಂದ್ರಯಾನ್-2 ಅಭಿಯಾನದ ಲ್ಯಾಂಡರ್ ಜೊತೆ ಕಟ್ಟಕಡೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡು ಆಘಾತಕ್ಕೆ ಒಳಗಾಗಿ ವಿಜ್ಞಾನಿಗಳಿಗೆ ನೈತಿಕ ಬೆಂಬಲ ನೀಡಿ ಹುರಿದುಂಬಿಸಿದ ಎಲ್ಲ ಭಾರತೀಯರು ಮತ್ತು ವಿದೇಶಿಯರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಕೃತಜ್ಞತೆ ಸಲ್ಲಿಸಿದೆ.
ನೀವೆಲ್ಲರೂ ನಮ್ಮೊಂದಿಗೆ ಇದುದಕ್ಕಾಗಿ ಧನ್ಯವಾದ ಸಲ್ಲಿಸುತ್ತೇವೆ. ಭಾರತೀಯರ ಭರವಸೆಗಳು ಮತ್ತು ಕನಸುಗಳಿಂದ ಉತ್ತೇಜಿತರಾಗಿ ನಾವು ಮುನ್ನಡೆಯುವುದನ್ನು ಮುಂದುವರಿಸುತ್ತೇವೆ. ವಿದೇಶಗಳ ವಿಜ್ಞಾನಿಗಳು ಮತ್ತು ಅಲ್ಲಿನ ಜನರು ಕೂಡ ನಮಗೆ ನೈತಿಕ ಸ್ಥೈರ್ಯ ನೀಡಿದ್ದಾರೆ.ಅವರಿಗೂ ನಾವು ಕೃತಜ್ಞತೆಗಳನ್ನು ತಿಳಿಸಲು ಬಯಸುತ್ತೇವೆ ಎಂದು ಇಸ್ರೋ ಇಂದು ಬೆಳಗ್ಗೆ ಟ್ವೀಟರ್ನಲ್ಲಿ ತಿಳಿಸಿದೆ.
ನಲವತ್ತೈದು ದಿನಗಳ ಸುದೀರ್ಘ ಕಾರ್ಯಾಚರಣೆ ನಂತರ ಚಂದಿರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವುದಕ್ಕೆ ಕೇವಲ 400 ಮೀಟರ್ಗಳು ಇದ್ದಾಗ ಅದು ಇಸ್ರೋ ಕಂಟ್ರೋಲ್ ರೂಮ್ ಜೊತೆ ಸಂಪರ್ಕ ಕಳೆದುಕೊಂಡಿತ್ತು. ಶೇ.99ರಷ್ಟು ಯಶಸ್ಸು ಸಾಧಿಸಿದ್ದ ಇಸ್ರೋ ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡು ತೀವ್ರ ಹತಾಶೆಗೆ ಒಳಗಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ವಿರೋಧ ಪಕ್ಷಗಳ ಮುಖಂಡರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಸಿನಿಮಾ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ವಿದೇಶಿಯರು ಭಾರತದ ಸಾಧನೆ ಮೆಚ್ಚುಗೆ ವ್ಯಕ್ತಪಡಿಸಿ ಅಲ್ಪ ಹಿನ್ನಡೆ ನೋವಿಗೆ ಸಾಂತ್ವನದ ಮಾತುಗಳನ್ನು ಹೇಳಿದ್ದರು.