ಪಕ್ಷದ ನಿಯೋಗವನ್ನು ಪ್ರಧಾನಿಯವರ ಬಳಿಗೆ ಕೊಂಡೊಯ್ಯಲಾಗುವುದು-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು

ಬೆಂಗಳೂರು, ಸೆ.18- ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವು ನೀಡುವಂತೆ ಕೋರಲು ನಮ್ಮ ಪಕ್ಷದ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಕೊಂಡೊಯ್ಯಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಆ ನಂತರವೂ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ನೆರವು ಬಾರದಿದ್ದರೆ ಹೋರಾಟ ಮಾಡುವುದಾಗಿ ಹೇಳಿದರು.

ಹೋರಾಟ ಮಾಡುವುದರಲ್ಲಿ ನಾವು ಹಿಂದೆ ಬೀಳುವುದಿಲ್ಲ. ಯಾವುದೇ ದಾಕ್ಷಿಣ್ಯವೂ ಇಲ್ಲ. ಹೋರಾಟ ಮಾಡುವುದನ್ನು ಯಾರಿಂದಲೂ ಕಲಿಯಬೇಕಾಗಿಲ್ಲ, ಕಾಂಗ್ರೆಸ್‍ನವರು ಪ್ರತಿಭಟನೆ ಮಾಡಿದರೆ ಸಂತೋಷ ಎಂದರು.

ನೈಸ್ ಸಂಸ್ಥೆ ವಿರುದ್ಧ ಸಾಕಷ್ಟು ಹೋರಾಟ ಮಾಡಿದ್ದನ್ನು ನೀವೇ ನೋಡಿದ್ದೀರಿ. ಹೋರಾಟವೇ ನಮ್ಮ ಜೀವನ ಎಂದ ಗೌಡರು, ಮಧ್ಯಂತರ ಪರಿಹಾರ ನೀಡುವಂತೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದು, ಅದಕ್ಕೆ ಇದುವರೆಗೂ ಉತ್ತರ ಬಂದಿಲ್ಲ. ಬಿಜೆಪಿ ನಾಯಕರು ಕಾಶ್ಮೀರ ಮತ್ತಿತರ ವಿಚಾರದಲ್ಲಿ ಬ್ಯುಸಿಯಾಗಿರಬಹುದು. ನಮ್ಮ ಪತ್ರ ನೋಡಲು ಅವರಿಗೆ ಸಮಯ ಇಲ್ಲ ಎನಿಸುತ್ತದೆ ಎಂದು ಗೌಡರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ