ಯಾದಗಿರಿ/ಬೆಂಗಳೂರು: ಕಾವಿಧಾರಿಗಳ ಕಾಮಲೀಲೆಗಳ ಪುರಾಣಗಳ ಪಟ್ಟಿಗೆ ಈಗ ಹೊಸ ಸೇರ್ಪಡೆಯಾಗಿದೆ. ಯಾದಗಿರಿಯ ಪ್ರತಿಷ್ಠಿತ ಕಣ್ವ ಮಠದ ಸ್ವಾಮೀಜಿ ವಿದ್ಯಾವಾರಿಧಿ ತೀರ್ಥ ಅವರ ಕಾಮಕಾಂಡದ ಸಂದೇಶ ಮತ್ತು ವಿಡಿಯೋಗಳು ಬಯಲಾಗಿವೆ. ವಿದ್ಯಾವಾರಿಧಿ ಸ್ವಾಮೀಜಿ ಹನಿಟ್ರ್ಯಾಪ್ನಲ್ಲಿ ಸಿಕ್ಕಿಬಿದ್ದಿದ್ದಾರೆ. ಚಾತುರ್ಮಾಸ್ಯದಲ್ಲಿರುವಾಗಲೇ ಯುವತಿಯನ್ನು ಸ್ವಾಮೀಜಿ ಮಂಚಕ್ಕೆ ಕರೆದದ್ದು, ಆಕೆಯೊಂದಿಗೆ ಅನೇಕ ಅಶ್ಲೀಲ ಸಂಭಾಷಣೆ ನಡೆಸಿರುವುದು ಈ ಹನಿಟ್ರ್ಯಾಪ್ನಿಂದ ಗೊತ್ತಾಗಿದೆ. ಪ್ರಕರಣವು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಸ್ವಾಮೀಜಿ ಪೀಠ ತ್ಯಾಗ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಯಾದಗಿರಿಯ ಹುಣಸಿಹೊಳಿ ಕಣ್ವಮಠಕ್ಕೆ ರಾಜ್ಯಾದ್ಯಂತ ವಿವಿಧೆಡೆ ಶಾಖಾ ಮಠಗಳಿವೆ. ಯಲಹಂಕದಲ್ಲಿರುವ ಅಂಥ ಒಂದು ಶಾಖಾ ಮಠದಲ್ಲಿ ಸ್ವಾಮೀಜಿಗೆ ಹನಿಟ್ರ್ಯಾಪ್ ಮಾಡಲಾಗಿದೆ. ಚಾತುರ್ಮಾಸ್ಯಕ್ಕೆ ಬಂದಿದ್ದ ಸ್ವಾಮೀಜಿ ಜೊತೆ ಸಂಗೀತಾ ಎಂಬ ಮಹಿಳೆ ಸ್ನೇಹ ಬೆಳೆಸುತ್ತಾಳೆ. ಇಬ್ಬರ ಸ್ನೇಹವು ಕಾಮಕ್ಕೆ ತಿರುಗಿ ಮೊಬೈಲ್ ಮೂಲಕ ಅಶ್ಲೀಲ ಸಂದೇಶ, ಸಂಭಾಷಣೆಗಳು ವಿನಿಮಯವಾಗುತ್ತದೆ. ವಿಡಿಯೋ ಕಾಲ್ ಮೂಲಕವೂ ಇಬ್ಬರೂ ಸೆಕ್ಸ್ ಚ್ಯಾಟಿಂಗ್ ಮಾಡುತ್ತಾರೆ. ಇವೆಲ್ಲವನ್ನೂ ಆ ಮಹಿಳೆ ರೆಕಾರ್ಡ್ ಮಾಡಿಕೊಂಡಿದ್ಧಾಳೆ.
2014ರಲ್ಲಿ ಕಣ್ವ ಮಠದ ಪೀಠ ಏರಿದ್ದ ವಿದ್ಯಾವಾರಿಧಿ ತೀರ್ಥರ ಬಗ್ಗೆ ಗೊತ್ತಿರುವವರೇ ಈ ಕೆಲಸ ಮಾಡಿದ್ದಾರೆ. ಸಂಗೀತಾ ಎಂಬ ಈ ಮಹಿಳೆ ಮೂಲಕ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಎಲ್ಲಾ ದಾಖಲೆ ಸಂಗ್ರಹಗೊಂಡ ಬಳಿಕ ಶ್ರೀಪಾದ ಎಂಬಾತ ತಾನು ಸಂಗೀತಾಳ ಗಂಡ ಎಂದು ಹೇಳಿಕೊಂಡು ಸ್ವಾಮೀಜಿಯನ್ನು ಭೇಟಿಯಾಗುತ್ತಾನೆ. ನಿಮ್ಮಿಂದ ನನ್ನ ಸಂಸಾರ ಹಾಳಾಗಿದೆ. ಪರಿಹಾರ ಕೊಡಿ ಎಂದು ಹೇಳಿ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಡುತ್ತಾನೆ. ದುಡ್ಡು ಕೊಡದಿದ್ದರೆ ತನ್ನ ಬಳಿ ಇರುವ ವಿಡಿಯೋ ಮತ್ತಿತರ ದಾಖಲೆಗಳನ್ನ ಹೊರಗೆ ಬಿಡುವುದಾಗಿ ಬೆದರಿಕೆ ಒಡ್ಡುತ್ತಾನೆ. ಇದರಿಂದ ಹೆದರಿದ ವಿದ್ಯಾವಾರಿಧಿ ತೀರ್ಥರು ಚಾತುರ್ಮಾಸ ಮುಗಿದ 10 ದಿನದೊಳಗೆ 50 ಲಕ್ಷ ಕೊಡಲು ಒಪ್ಪಿಕೊಳ್ಳುತ್ತಾರೆ. ಆದರೆ, ಕೊಟ್ಟ ಮಾತಿನಂತೆ ಹಣ ಕೊಡದಿದ್ದಾಗ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.