ಬೆಂಗಳೂರು, ಸೆ.18-ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದು, ಸಿದ್ದರಾಮಯ್ಯ ಅವರ ವಿರೋಧ ಪಕ್ಷದ ನಾಯಕನ ಕನಸಿಗೆ ಅಡೆತಡೆಗಳು ಎದುರಾಗಿದೆ.
ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಬಿಜೆಪಿಗೆ ಅಧಿಕಾರ ಸಿಗುವಂತಾಯಿತು ಎಂದು ಪರಮೇಶ್ವರ್ ದೆಹಲಿ ನಾಯಕರಿಗೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಬೇಕೆಂದು ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಹಳಷ್ಟು ಮಂದಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಸಭೆಗೆ ಗೈರು ಹಾಜರಾಗಿದ್ದ ಪರಮೇಶ್ವರ್ ಅವರು, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನದ ರೇಸಿನಲ್ಲಿ ಪರಮೇಶ್ವರ್, ರಮೇಶ್ಕುಮಾರ್, ಎಚ್.ಕೆ.ಪಾಟೀಲ್, ಕೃಷ್ಣಭೆರೇಗೌಡ ಸೇರಿದಂತೆ ಹಲವಾರು ನಾಯಕರ ಹೆಸರುಗಳಿವೆ. ದಿಢೀರ್ ಎಂದು ಪರಮೇಶ್ವರ್ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿರುವುದು ಕುತೂಹಲಗಳನ್ನು ಹೆಚ್ಚಿಸಿದೆ.
ಎಚ್.ಕೆ.ಪಾಟೀಲ್ ಅವರ ಪರವಾಗಿ ಮೂ ಲಕಾಂಗ್ರೆಸ್ಸಿಗರು ಲಾಬಿ ಮಾಡುತ್ತಿದ್ದು, ಸಿದ್ದರಾಮಯ್ಯ ಅವರ ಪರವಾಗಿ ಬಹಳಷ್ಟು ನಾಯಕರು ಒಲವು ತೋರಿದ್ದಾರೆ. ಈ ಮಧ್ಯೆ ಎಲ್ಲಿಯೂ ಮಾತನಾಡದೆ ಮೌನವಾಗಿದ್ದ ಪರಮೇಶ್ವರ್, ದಿಢೀರ್ ಎಂದು ಕ್ರಿಯಾಶೀಲರಾಗಿದ್ದಾರೆ.
ಅಧಿಕಾರ ಕಳೆದುಕೊಂಡ ನಂತರ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಅವರು, ತಮ್ಮ ಶಿಕ್ಷಣ ಸಂಸ್ಥೆಯತ್ತ ಹೆಚ್ಚಿನ ಗಮನ ಹರಿಸಿದ್ದರು.
ಮೂಲಕಾಂಗ್ರೆಸ್ಸಿಗರಿಗೆ ವಿಪಕ್ಷ ನಾಯಕನ ಸ್ಥಾನ ನೀಡಬೇಕೆಂದು ಒತ್ತಡ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ಪ್ರಕಟಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.