ಬಿಜೆಪಿ ನಾಯಕರಿಗೆ ಪ್ರಧಾನಿಯವರ ಬಳಿ ಅನುದಾನ ಕೇಳುವ ಧೈರ್ಯವಿಲ್ಲ-ಕಾಂಗ್ರೇಸ್

ಬೆಂಗಳೂರು, ಸೆ.18-ನೆರೆ ಮತ್ತು ಬರ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯವನ್ನು ವಿರೋಧಿಸಿ ಪ್ರತಿಭಟನೆ ತೀವ್ರಗೊಳಿಸಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪ್ರಸ್ತುತ ರಾಜಕಾರಣದ ಹಲವಾರು ವಿಷಯಗಳು ಗಂಭೀರ ಚರ್ಚೆಗಳಾಗಿವೆ. ನೆರೆ, ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಅನುದಾನ ನೀಡುವಲ್ಲಿ ಕೇಂದ್ರದ ತಾರತಮ್ಯ, ದ್ವೇಷದ ರಾಜಕಾರಣ, ಕಾಂಗ್ರೆಸ್ಸಿಗರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು, ಡಿ.ಕೆ.ಶಿವಕುಮಾರ್ ಅವರ ಬಂಧನ, ಅನುದಾನ ಹಂಚಿಕೆಯಲ್ಲಿನ ತಾರತಮ್ಯ, ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತಂತೆ ಹಲವಾರು ವಿಷಯಗಳು ಸಭೆಯಲ್ಲಿ ಚರ್ಚೆಯಾಗಿವೆ.

ಮೊದಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಸಮ್ಮೇಳನ ಸಭಾಂಗಣ ಬಳಕೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲೇ ಸಭೆ ನಡೆಸಲಾಯಿತು.

ಸಭೆ ಬಳಿಕ ವಿಧಾನಸೌಧಕ್ಕೆ ತೆರಳಿ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಯಿತು. ಮಾಜಿ ಉಪಮುಖ್ಯಮಂತ್ರಿ ಡಾ|ಜಿ.ಪರಮೇಶ್ವರ್ ಹೊರತುಪಡಿಸಿ ಇನ್ನುಳಿದ ಬಹುತೇಕ ಶಾಸಕರು ಶಾಸಕಾಂಗ ಸಭೆಯಲ್ಲಿ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬೆಳಗ್ಗೆ 11 ಗಂಟೆಯಿಂದ ಸುಮಾರು ಎರಡೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ಬಹುತೇಕ ನೆರೆ ಮತ್ತು ಬರದ ಕುರಿತು ಚರ್ಚಿಸಲಾಯಿತು. ರಾಜ್ಯದ ಮುಕ್ಕಾಲು ಭಾಗದ ಜಿಲ್ಲೆಗಳು ನೆರೆ ಪೀಡಿತವಾಗಿವೆ. ಸುಮಾರು 7 ತಾಲೂಕುಗಳು ಬರ ಪೀಡಿತವಾಗಿವೆ. ಕೇಂದ್ರ ಸರ್ಕಾರ ಈವರೆಗೂ ನೆರೆ ನಿರ್ವಹಣೆಗೆ ಒಂದು ರೂ. ಅನುದಾನ ಕೊಟ್ಟಿಲ್ಲ. ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿಯವರ ಬಳಿ ಅನುದಾನ ಕೇಳುವ ಧೈರ್ಯ ಇಲ್ಲ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರದಿಂದಾಗುತ್ತಿಲ್ಲ ಎಂದು ಸಭೆಯಲ್ಲಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ. ಯಾವಾಗ ಬೇಕಾದರೂ ಪತನಗೊಳ್ಳುತ್ತದೆ. ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದ್ದು, ಎಲ್ಲಾ ಶಾಸಕರು, ಮಾಜಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪೂರ್ವ ತಯಾರಿ ಮಾಡಿಕೊಳ್ಳಬೇಕೆಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ