ದೇಶದ ಬ್ಯಾಂಕಿಂಗ್ ರಂಗಕ್ಕೆ ಕರ್ನಾಟಕದ ಕೊಡುಗೆ ಜಾಸ್ತಿ-ಸಚಿವ ಜೆ.ಸಿ.ಮಾಧುಸ್ವಾಮಿ

ತುಮಕೂರು, ಸೆ.17-ದೇಶದಲ್ಲಿ ಪರ್ಯಾಯ ಆರ್ಥಿಕ ವ್ಯವಸ್ಥೆಯ ಮೂಲಕ ಅಭಿವೃದ್ಧಿ ಸಾಧಿಸಬಹುದು ಎಂಬುದನ್ನು ಮಹಾತ್ಮಗಾಂಧೀಜಿ ಮನಗಂಡಿದ್ದರು, ಅದಕ್ಕಾಗಿ ಸಹಕಾರಿಯ ಕನಸುಕಂಡಿದ್ದರು ಎಂದು ಕಾನೂನು ಸಂಸದೀಯ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುಕುಲ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಪರ್ಯಾಯ ಆರ್ಥಿಕ ವ್ಯವಸ್ಥೆಯಿಂದ ಮಾತ್ರ ಜನರ ಅಭಿವೃದ್ಧಿ ಸಾಧ್ಯವೆಂದಿದ್ದರು. ಸಹಕಾರಿ ಮೂಲಕ ಆರ್ಥಿಕ ಸಬಲತೆ ಸಾಧಿಸಬಹುದಾಗಿದ್ದು, ವೈಯಕ್ತಿಕ ಅಭಿವೃದ್ಧಿಗೂ ಅವಕಾಶವಿದೆ ಎಂದು ತಿಳಿಸಿದರು.

ಬ್ಯಾಂಕ್‍ನಲ್ಲಿರುವುದು ಮಧ್ಯಮ ವರ್ಗದ ಮಂದಿ ಮಾತ್ರ, ಶ್ರೀಮಂತರಿಗೆ ಬ್ಯಾಂಕ್‍ನ ಅವಶ್ಯಕತೆ ಇಲ್ಲ, ಉಳಿತಾಯ ಮಾಡುವ ಮಧ್ಯಮ ವರ್ಗದವರಿಂದಲೇ ದೇಶದಲ್ಲಿ ಬ್ಯಾಂಕಿಂಗ್ ರಂಗ ನಡೆಯುತ್ತಿದ್ದು, ದೇಶದ ಬ್ಯಾಕಿಂಗ್ ರಂಗಕ್ಕೆ ಕರ್ನಾಟಕದ ಕೊಡುಗೆ ಜಾಸ್ತಿ ಇದ್ದು, ರಾಷ್ಟ್ರೀಕೃತ ಬ್ಯಾಂಕ್ ಹೊರತು ಪಡಿಸಿ ಹೆಚ್ಚು ಬ್ಯಾಂಕ್ ಗಳನ್ನು ಪ್ರಾರಂಭಿಸಿದ್ದು ಕರ್ನಾಟಕದಲ್ಲಿಯೇ ಎಂದು ಹೇಳಿದರು.

ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಕಾಲೇಜು ಶುರು ಮಾಡಲು ಸಹಕಾರಿ ಕಾರಣ, ದೇಶದ ಅಭಿವೃದ್ಧಿ ಸಹಕಾರಿ ಪೂರಕವಾಗಿದೆ, ಹಣ ಮಾಡುವುದನ್ನೇ ಗುರಿಯಾಗಿಟ್ಟುಕೊಳ್ಳದೆ ಸಮಾಜಮುಖಿಯಾಗಿ ಗುರುಕುಲ ಸಹಕಾರಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸಹಕಾರಿ ಕ್ಷೇತ್ರ ವಿಶಾಲವಾಗಿದ್ದು, ಬೆಳವಣಿಗೆಗೆ ಸಹಕಾರಿಯಾಗಿರುವುದು ಎಲ್ಲರೂ ಮನಗಂಡಿದ್ದರೆ, ಜನರು ನಂಬಿಕೆ ಇಟ್ಟಿರುವುದರಿಂದಲೇ ಸೌಹಾರ್ದಗಳು ಚೆನ್ನಾಗಿ ನಡೆಯುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಸಹಕಾರಿ ಸಂಘಟನೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಗುರುಕುಲ ಸಹಕಾರಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಎಂ.ಬಿ.ನಂದೀಶ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಗದೀಶ್, ವಿದ್ಯಾರ್ಥಿನಿಲಯದ ಅಧ್ಯಕ್ಷರಾದ ಬಸವರಾಜಪ್ಪ, ಸಿದ್ದಪ್ಪ, ಬಿ.ಗಂಗಾಧರಯ್ಯ, ಸಹಕಾರಿ ನಿರ್ದೇಶಕರು ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ