ಬೆಂಗಳೂರು,ಸೆ.17- ಮುಂದಿನ ವಾರದ ವಿಚಾರಣೆಯಲ್ಲಿ ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ವಿಚಾರಣೆ ಮುಂದೂಡಿಕೆಯಾದ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಅವರು, ಹೋಪ್ ಫಾರ್ ದಿ ಬೆಸ್ಟ್ ಎಂಬಂತೆ ಕಾದು ನೋಡುತ್ತೇವೆ. ಬಹಳ ಹಿಂದೆಯೇ ಪ್ರಕರಣದ ವಿಚಾರಣೆಯಾಗಬೇಕಿತ್ತು. ತಡವಾಗಿದೆ. ಹಾಗಂತ ವಿಶ್ವಾಸ ಕಳೆದುಕೊಳ್ಳಲು ಆಗುವುದಿಲ್ಲ. ಕಾದು ನೋಡಬೇಕು ಎಂದರು.
ಅನಗತ್ಯವಾಗಿ ರಮೇಶ್ಕುಮಾರ್ ಅವರು ನಮ್ಮನ್ನು ಅನರ್ಹಗೊಳಿಸಿ ಅನ್ಯಾಯ ಮಾಡಿದ್ದಾರೆ. ಪ್ರಕರಣದ ವಿಚಾರಣೆ ಶೀಘ್ರವಾಗಿ ನಡೆದು ನ್ಯಾಯ ಸಿಗಲಿದೆ ಎಂಬ ಭರವಸೆಯಿತ್ತು. ಆದರೆ ಅಲ್ಲೂ ವಿಳಂಬವಾಗಿ ಬೇಸರವಾಗಿದೆ ಎಂದು ಹೇಳಿದರು.
ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಅವರು ನಮ್ಮ ದೂರದ ಸಂಬಂಧಿ ಎಂಬ ವಿಷಯವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಬಿ.ಸಿ.ಪಾಟೀಲ್ ಜಾರಿಕೊಂಡರು.
ಇನ್ನೊಬ್ಬ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ, ಪ್ರಕರಣದಿಂದ ನ್ಯಾಯಮೂರ್ತಿಗಳು ಹಿಂದೆ ಸರಿದಿರುವುದರಿಂದ ನಮಗೆ ಹಿನ್ನಡೆಯಾಗಿದೆ ಎಂಬುದು ಸರಿಯಲ್ಲ. ಸ್ವಲ್ಪ ವಿಳಂಬವಾಗುತ್ತಿದೆ. ಆದರೆ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ನ್ಯಾಯಾಲಯದ ಪ್ರಕರಣದಲ್ಲಿ ನಾವು ಏನೂ ಮಾಡಲು ಸಾದ್ಯವಿಲ್ಲ. ಯಾವುದೇ ರೀತಿ ಪ್ರಭಾವ ಬೀರಲು ಸಾಧ್ಯವಿಲ್ಲ. ನ್ಯಾಯಾಲಯದ ಇಚ್ಚೆಯಂತೆ ವಿಚಾರಣೆ ನಡೆಯುತ್ತದೆ.ಅಲ್ಲಿಯವರೆಗೂ ಕಾದುನೋಡುತ್ತೇವೆ ಎಂದರು.
ಇಬ್ಬರು ಅನರ್ಹ ಶಾಸಕರು ಕ್ಷೇತ್ರದ ಕೆಲಸಗಳು ಮುಂದುವರೆದಿವೆ. ಜನರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.