ಇಂದು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು,ಸೆ.17- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕಸ್ಟಡಿಯ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರಂಭದಲ್ಲಿ ನಾಲ್ಕು ದಿನಗಳಕಾಲ ವಿಚಾರಣೆ ನಡೆಸಿದ ಜಾರಿನಿರ್ದೇಶನಾಲಯದ ಅಧಿಕಾರಿಗಳು ಸೆ.3ರಂದು ಅವರನ್ನು ಬಂಧಿಸಿದರು. ಮೊದಲು 10 ದಿನಗಳ ಕಾಲ ಇಡಿ ವಶಕ್ಕೆ ನೀಡಲಾಗಿತ್ತು. ಆನಂತರ ಮತ್ತೆ ನಾಲ್ಕು ದಿನಗಳ ಕಾಲ ಕಸ್ಟಡಿಯ ಅವಧಿಯನ್ನು ವಿಸ್ತರಣೆ ಮಾಡಲಾಯಿತು. ಒಟ್ಟು 14 ದಿನಗಳ ಕಾಲದ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಈ ಮಧ್ಯೆ ಡಿ.ಕೆ.ಶಿವಕುಮಾರ್ ಪರವಾಗಿ ಖ್ಯಾತ ವಕೀಲ ಮುಕುಲ್ ರೋಹ್ಟಗಿ ವಾದ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಅಭಿಷೇಕ್ ಮನುಸಿಂಗ್ವಿ ಡಿಕೆಶಿ ಪರ ವಾದಿಸುತ್ತಿದ್ದರು.

ಜಾಮೀನು ಅರ್ಜಿ ವಿಚಾರಣೆಯಲ್ಲಿ ಹಿನ್ನಡೆಯಾಗಿದ್ದರಿಂದ ಡಿ.ಕೆ.ಶಿವಕುಮಾರ್ ಅವರು ವಕೀಲರನ್ನು ಬದಲಾವಣೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು.

ನಿನ್ನೆ ಡಿ.ಕೆ.ಶಿವಕುಮಾರ್ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಮುಕುಲ್ ರೋಹ್ಟಗಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇಂದು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ಯಾರು ವಾದ ಮಾಡಲಿದ್ದಾರೆ ಎಂಬ ಕುತೂಹಲದ ಜೊತೆಗೆ ಜಾಮೀನು ಸಿಗಲಿದೆಯೋ ಇಲ್ಲವೋ ಎಂಬ ಕುತೂಹಲವೂ ಹೆಚ್ಚಾಗಿದೆ.

ಇಡಿ ಕಸ್ಟಡಿಯಲ್ಲಿದ್ದ ವೇಳೆಯಲ್ಲೇ ಕಳೆದ ಮೂರು ದಿನಗಳಿಂದ ರಕ್ತದೊತ್ತಡ ಏರಿಳಿತ, ಜ್ವರದಿಂದ ಬಳಲುತ್ತಿದ್ದ ಡಿ.ಕೆ.ಶಿವಕುಮಾರ್ ಅವರ ವಿಚಾರಣೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಇದರಿಂದಾಗಿ ಮತ್ತಷ್ಟು ದಿನ ಕಸ್ಟಡಿಗೆ ನೀಡುವಂತೆ ಇಡಿ ಅಧಿಕಾರಿಗಳು ಕೇಳುವ ಸಾಧ್ಯತೆ ಇದೆ. ಮತ್ತೆ ಕಸ್ಟಡಿಗೆ ಕೊಡಲಾಗುವುದೋ ಅಥವಾ ನ್ಯಾಯಾಂಗ ಬಂಧನವಾಗುವುದೋ ಇಲ್ಲವೇ ಜಾಮೀನು ಸಿಗುವುದೋ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ