ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಕಠಿಣ ನಾಗರಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಜಮ್ಮು – ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಸಂವಿಧಾನದ ಪರಿಚ್ಛೇದ 370ನ್ನು ರದ್ದುಗೊಳಿಸಿದ ದಿನದಿಂದಲೂ ಫಾರೂಕ್ ಅಬ್ದುಲ್ಲಾರನ್ನು ಗೃಹ ಬಂಧನದಲ್ಲಿಡಲಾಗಿತ್ತು.
ನಾಗರಿಕ ಸುರಕ್ಷತಾ ಕಾಯ್ದೆಯಡಿ ವ್ಯಕ್ತಿಯನ್ನು ಎರಡು ವರ್ಷಗಳವರೆಗೆ ಯಾವುದೇ ಕಾನೂನಾತ್ಮಕ ನ್ಯಾಯಾಂಗ ತನಿಖೆ ನಡೆಸದೇ ವಶದಲ್ಲಿಟ್ಟುಕೊಳ್ಳಬಹುದು. ಈ ನಾಟಕೀಯ ಬೆಳವಣಿಗೆಯಿಂದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಹಿರಿಯ ಮುಖಂಡ ಫಾರೂಕ್ ಅಬ್ದುಲ್ಲಾ ಭವಿಷ್ಯ ಕಗ್ಗಂಟಾಗಿದೆ.
ಫಾರೂಕ್ ಅಬ್ದುಲ್ಲಾ ಅವರ ಮನೆಯನ್ನೇ ಜೈಲಿನ ಅಂಗಸಂಸ್ಥೆಯಾಗಿ ಘೋಷಿಸಿದ್ದು, ಗೃಹಬಂಧನದಲ್ಲೇ ಮುಂದುವರೆಯಲಿದ್ದಾರೆ. ಆದರೆ ಕುಟುಂಬಸ್ಥರು ಮತ್ತು ಸ್ನೇಹಿತರು ಅವರನ್ನು ಭೇಟಿ ಮಾಡಲು ಅವಕಾಶವಿದೆ.