ಕೇಂದ್ರ ಸಚಿವ ಅಮಿತ್ ಷಾರವರಿಗೆ ಡಿಸಿಎಂ ಗೋವಿಂದ ಕಾರಜೋಳ ಟಾಂಗ್

ಬಾಗಲಕೋಟೆ, ಸೆ.15- ಯಾರೇ ಬಂದರೂ ಕನ್ನಡ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ. ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಟಾಂಗ್ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. 2500 ವರ್ಷಗಳಷ್ಟು ಹಳೆಯದಾದ ಈ ಭಾಷೆಯನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಭೂಮಿ ಮೇಲೆ ಜನ ಇರುವವರೆಗೂ ಕನ್ನಡ ಭಾಷೆ ಇರುತ್ತದೆ. ಅಷ್ಟು ಪ್ರಾಚೀನತೆ ನಮ್ಮ ಭಾಷೆಗೆ ಇದೆ. ನಮ್ಮ ಭಾಷೆ ನಮ್ಮ ಆಸ್ಮಿತೆ ಎಂದು ತಿಳಿಸಿದರು.

ಯಾರೇ ಆಗಲಿ ಕನ್ನಡ ಭಾಷೆಯನ್ನು ಅಳಿಸಿಹಾಕಲು ಸಾಧ್ಯವಾಗುವುದಿಲ್ಲ. ಮುಸ್ಲಿಮರು, ಬ್ರಿಟಿಷರು, ಪೋರ್ಚುಗೀಸರು ಸೇರಿದಂತೆ ಅನೇಕರು ಈ ನಾಡಿನಲ್ಲಿ ಆಡಳಿತ ನಡೆಸಿದ್ದಾರೆ. ಆ ಕಾಲದಿಂದಲೂ ನಮ್ಮ ಭಾಷೆ ಗಟ್ಟಿಯಾಗಿ ನೆಲೆಯೂರಿದೆ. ಮುಂದೆಯೂ ಕೂಡ ಗಟ್ಟಿಯಾಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ನಿನ್ನೆಯಷ್ಟೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಹಿಂದಿ ದಿವಸದ ಅಂಗವಾಗಿ ಭಾರತದ ಬಹುತೇಕ ಜನರು ಮಾತನಾಡುವ ಹಿಂದಿ ಭಾಷೆಯು ದೇಶವನ್ನು ಬೆಸೆಯುತ್ತಿದೆ. ಇತರ ಭಾಗಗಳಿಗೂ ಹಿಂದಿ ಭಾಷೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನೀಡಿದ ಹೇಳಿಕೆಗೆ ಹಿಂದಿಯೇತರ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಸಿಪಿಎಂ, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಇದನ್ನು ತೀವ್ರವಾಗಿ ವಿರೋಧಿಸಿದ್ದರು. ಕರ್ನಾಟಕದಲ್ಲೂ ಕೂಡ ಷಾ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಆ್ಯಷ್‍ಟ್ಯಾಗ್‍ಗಳ ಮೂಲಕ ಈ ವಿಚಾರದ ಚರ್ಚೆಯಾಗುತ್ತಿದೆ. ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆ ಕಂಡಿದೆ. ಹಾಗಿರುವಾಗ ಒಂದು ಭಾಷೆಯನ್ನು ಕಡ್ಡಾಯಗೊಳಿಸುವುದು ಎಷ್ಟು ಸಮಂಜಸ ಎಂದು ಜನರು ಪ್ರಶ್ನಿಸಿದ್ದಾರೆ.

ಎಲ್ಲ ಭಾಷೆ, ಸಂಸ್ಕøತಿಗಳನ್ನು ನಾವು ಗೌರವಿಸಬೇಕು. ಯಾವುದೇ ಕಾರಣಕ್ಕೂ ನಮ್ಮ ಮಾತೃಭಾಷೆಯನ್ನು ಬಲಿಕೊಡಬಾರದು ಎಂಬ ಹೋರಾಟಗಳು ಪ್ರಾರಂಭವಾಗಿವೆ. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನೀಡಿರುವ ಹೇಳಿಕೆ ಕನ್ನಡಿಗರ ಹೋರಾಟಕ್ಕೆ, ಕನ್ನಡಪರ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ