ಹುಬ್ಬಳ್ಳಿ, ಸೆ.14- ಭ್ರಷ್ಟಾಚಾರ ಮತ್ತು ಲೂಟಿ ಮಾಡಿದವರ ಪರ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರೋದು ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ ಹೆಸರಲ್ಲಿ 800 ಕೋಟಿ ರೂಪಾಯಿ ಆಸ್ತಿ ಇದೆ.ಅವರ ಮಗಳ ಹೆಸರಲ್ಲಿ 108 ಕೋಟಿ ಆಸ್ತಿ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಅದನ್ನೆಲ್ಲಾ ಅವರೇ ದುಡಿದು ಸಂಪಾದಿಸಿದ್ದರೇ ಎಂದು ಉತ್ತರ ಕೊಡಬೇಕು. ಇನ್ನೂ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಲೂಟಿ ಮಾಡಿದವರ ಪರ ಪ್ರತಿಭಟನೆ ಮಾಡುತ್ತಿದ್ದು ಇದು ಖಂಡನೀಯ ಎಂದರು.
ಅಲ್ಲದೇ ಜಾತಿ ಹೆಸರಲ್ಲಿ ಪ್ರತಿಭಟನೆ ಮಾಡಿದರೇ ಜನರು ಸೊಪ್ಪು ಹಾಕಲ್ಲ. ಭ್ರಷ್ಟಾಚಾರವನ್ನು ವಿರೋಧಿಸಲೆಂದೇ ದೇಶದ ಜನರು ಪ್ರಧಾನಿ ನರೇಂದ್ರ ಮೋದಿಗೆ ಎರಡನೇ ಬಾರಿ ಮತ ಹಾಕಿ ಅಧಿಕಾರ ಕೊಟ್ಟಿದ್ದಾರೆ.ಇದರಿಂದಾಗಿ ಜಾತಿ ಹೆಸರಲ್ಲಿ ಭ್ರಷ್ಟಾಚಾರ, ಲೂಟಿ ಮಾಡಿದ್ರೆ ಪಾರಾಗಬಹುದೆಂಬ ಮನೋಭಾವ ಸರಿಯಲ್ಲ. ಇನ್ನೂ ಜಾತಿ ಹೆಸರಲ್ಲಿ ಭ್ರಷ್ಟರ ಬೆಂಬಲಕ್ಕೆ ನಿಲ್ಲುವುದು ದುರಂತ ಎಂದು ಹರಿಹಾಯ್ದರು.
ಇನ್ನೂ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣನೆ ಮಾಡಿದ ವಿಚಾರ ಗಮನಕ್ಕೆ ಬಂದಿದ್ದು, ಆ ಬಗ್ಗೆ ವಿತತಿ ಸಚಿವರೊಂದಿಗೆ ಚರ್ಚಿಸಿದ್ದು ಅವರು ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಅಲ್ಲದೇ ನೆರೆ ಹಾವಳಿ ಪ್ರದೇಶಗಳಿಗೆ ಕೇಂದ್ರದಿಂದ ಶೀಘ್ರದಲ್ಲೇ ಪರಿಹಾರ ಬಿಡುಗಡೆ ಯಾಗಲಿದೆ ಎಂದರು.