ಬೆಂಗಳೂರು, ಸೆ.14- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಜನಪ್ರತಿನಿಧಿಗಳು ವಿಧ್ಯುಕ್ತವಾಗಿ ಆಹ್ವಾನ ನೀಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ವಸತಿ ಸಚಿವರೂ ಆಗಿರುವ ವಿ.ಸೋಮಣ್ಣ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ತನ್ವೀರ್ಸೇಠ್, ಮೈಸೂರು ಜಿಲ್ಲಾಧಿಕಾರಿ, ಮೇಯರ್ ಸೇರಿದಂತೆ ಮತ್ತಿತರರು ಯಡಿಯೂರಪ್ಪರನ್ನು ಆಹ್ವಾನಿಸಿದರು.
ಇದೇ 29ರಂದು ಬೆಳಗ್ಗೆ 9 ಗಂಟೆಗೆ ನಾಡ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರು ದಸರಾ ಆರಂಭವಾಗಲಿದೆ.
ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ಇಂದು ಯಡಿಯೂರಪ್ಪನವರನ್ನು ಮೈಸೂರು ಭಾಗದ ಜನಪ್ರತಿನಿಧಿಗಳು, ಸ್ವಾಗತ ಸಮಿತಿ, ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಆಹ್ವಾನಿಸಿದ್ದಾರೆ.ಇದೇ 29ರ ಬೆಳಗ್ಗೆ 9 ಗಂಟೆಗೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಅಕ್ಟೋಬರ್ 8ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ದಸರಾದಲ್ಲಿ ಪಾಲ್ಗೊಳ್ಳುವಂತೆ ರಾಜ್ಯಪಾಲರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೂ ಸಹ ಈಗಾಗಲೇ ಆಹ್ವಾನ ಕೊಟ್ಟಿದ್ದೇವೆ. ನಾಡ ಹಬ್ಬ ದಸರಾದಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಯುವ ದಸರಾ ಉದ್ಘಾಟಿಸಲು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರಿಗೂ ಒಂದು ನಿಯೋಗ ತೆರಳಿ ಆಹ್ವಾನ ಕೊಟ್ಟಿದೆ.ಅವರೂ ಕೂಡ ಬರಲು ಸಮ್ಮತಿಸಿದ್ದಾರೆ ಎಂದರು.
ಶಾಸಕ ರಾಮದಾಸ್ ನಮ್ಮ ಜತೆ ಬಾರದಿರುವ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಅವರಿಗೆ ಬಸವ ಸಮಿತಿಯಲ್ಲಿ ಬೇರೆ ಬೇರೆ ಜವಾಬ್ದಾರಿಗಳಿದ್ದುದರಿಂದ ನಮ್ಮ ಜತೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿ.ಟಿ.ದೇವೇಗೌಡರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಸರಾವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹೀಗಾಗಿ ಅವರ ಅನುಭವವನ್ನು ಪಡೆಯುತ್ತಿದ್ದೇನೆ. ಅವರು ಮಾತ್ರವಲ್ಲದೆ ಆ ಭಾಗದ ಜನಪ್ರತಿನಿಧಿಗಳು ಎಲ್ಲಾ ರೀತಿಯ ಸಹಕಾರ ಕೊಡುತ್ತಿದ್ದಾರೆ. ಇದಕ್ಕಾಗಿ ನಾನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದು ಸೋಮಣ್ಣ ತಿಳಿಸಿದರು.