ಬಿಜೆಪಿಯಲ್ಲಿ ಶಮನವಾಗದ ಭಿನ್ನಮತ

ಬೆಂಗಳೂರು, ಸೆ.14- ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿದ್ದವರ ಭಿನ್ನಮತ ಇನ್ನೂ ಶಮನವಾಗಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ನೆರೆ ಪೀಡಿತ ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಮತ್ತಿತರ ಜಿಲ್ಲೆಯ ಶಾಸಕರ ಸಭೆಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದರು.

ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ರಾಯಚೂರು ಸೇರಿದಂತೆ 9ಕ್ಕೂ ಹೆಚ್ಚು ಜಿಲ್ಲೆಗಳ ಶಾಸಕರಿಗೆ ಆಹ್ವಾನಿಸಲಾಗಿತ್ತು.
ಈ ಸಭೆಗೆ ಶಾಸಕರು ಕಡ್ಡಾಯವಾಗಿ ಹಾಜರಾಗಿ ಪ್ರವಾಹಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾಗಿರುವ ಪರಿಹಾರ ಕಾರ್ಯದ ಬಗ್ಗೆ ಸರ್ಕಾರಕ್ಕೆ ಅಗತ್ಯವಾದ ಮಾಹಿತಿ ನೀಡಬೇಕೆಂದು ಖುದ್ದು ಬಿ.ಎಸ್.ಯಡಿಯೂರಪ್ಪನವರೇ ತಿಳಿಸಿದ್ದರು.

ನಿಮ್ಮ ಯಾವುದೇ ಕಾರ್ಯಕ್ರಮಗಳಿದ್ದರೂ ಬದಿಗೊತ್ತಿ ಈ ಸಭೆಗೆ ಹಾಜರಾಗಬೇಕೆಂದು ಸೂಚನೆ ಸಹ ಕೊಟ್ಟಿದ್ದರು.ಆದರೆ, ಇಂದು ನಡೆದ ಸಭೆಗೆ ಶಾಸಕರಾದ ಉಮೇಶ್ ಕತ್ತಿ, ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಮತ್ತಿತರರು ದೂರ ಉಳಿದಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಪಿ.ರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಉಮೇಶ್‍ಕತ್ತಿ, ಲಕ್ಷ್ಮಣಸವದಿ, ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಾಗಿರುವುದು ಬಿಜೆಪಿಯಲ್ಲಿ ಭಿನ್ನಮತ ಇನ್ನೂ ಶಮನವಾಗಿಲ್ಲ ಎಂಬುದನ್ನು ದೃಢಪಡಿಸುವಂತಿತ್ತು.

ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ನೆರೆಯಿಂದ ಉಂಟಾಗಿರುವ ಪ್ರವಾಹದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಬೇಕು.ಎಷ್ಟು ಮನೆಗಳು ಕುಸಿದು ಹೋಗಿವೆ, ಜೀವಹಾನಿ, ಜಾನುವಾರುಗಳ ಸಾವು, ಬೆಳೆಗಳ ನಷ್ಟ ಸೇರಿದಂತೆ ಒಟ್ಟಾರೆ ಎಲ್ಲಾ ಮಾಹಿತಿ ನೀಡಬೇಕೆಂದು ಮುಖ್ಯಮಂತ್ರಿಗಳ ಕಚೇರಿಯಿಂದಲೇ ಮಾಹಿತಿ ನೀಡಲಾಗಿತ್ತು.ಆದರೆ, ಈ ಮೂವರ ಗೈರು ಹಾಜರಿಯಿಂದ ಪಕ್ಷದಲ್ಲಿ ಭಿನ್ನಮತ ಇನ್ನೂ ಇದೆ ಎಂಬುದನ್ನು ತೋರುವಂತಿತ್ತು.

ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಲಕ್ಷ್ಮಣಸವದಿಗೆ ಸಚಿವ ಸ್ಥಾನ ನೀಡುವುದರ ಜತೆಗೆ ಡಿಸಿಎಂ ಮಾಡಿರುವುದು ಉಮೇಶ್ ಕತ್ತಿಯ ಕಣ್ಣು ಕೆಂಪಾಗುವಂತೆ ಮಾಡಿದೆ. ಹೀಗಾಗಿಯೇ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕತ್ತಿ ಪಕ್ಷದ ನಾಯಕರ ವಿರುದ್ದ ಅಸಮಾಧಾನಗೊಂಡಿದ್ದಾರೆ.
ಒಂದು ಹಂತದಲ್ಲಿ ಅಸಮಾಧಾನಗೊಂಡಿದ್ದ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿ ಇನ್ನೇನು ಬಿಜೆಪಿಗೆ ಗುಡ್‍ಬೈ ಹೇಳಲಿದ್ದಾರೆ ಎಂಬ ವದಂತಿಯೂ ಕೇಳಿ ಬಂದಿತ್ತು.ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯ ಪ್ರವೇಶಿಸಿ ಎರಡನೇ ಹಂತದ ಸಂಪುಟ ವಿಸ್ತರಣೆ ವೇಳೆ ನಿಮಗೆ ಸ್ಥಾನಮಾನ ನೀಡುವುದಾಗಿ ಭರವಸೆ ಕೊಟ್ಟಾಗ ಕತ್ತಿ ಅಸಮಾಧಾನ ತಾತ್ಕಾಲಿಕವಾಗಿ ಶಮನವಾಗಿತ್ತು.

ಇದೇ ವೇಳೆ ಬಾಲಚಂದ್ರ ಜಾರಕಿಹೊಳಿಯನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಭಿನ್ನಮತವನ್ನು ಶಮನಗೊಳಿಸಲು ಮುಂದಾಗಿದ್ದರು.ಆದರೆ, ಇಂದಿನ ಸಭೆಗೆ ಉಮೇಶ್ ಕತ್ತಿ ದೂರ ಉಳಿದಿರುವುದು ಬಿಜೆಪಿಯಲ್ಲಿ ಬಿಕ್ಕಟ್ಟು ಇನ್ನೂ ಇದೇ ಎಂಬುದನ್ನು ಸಾಭೀತು ಮಾಡಿದೆ.
ಈ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರತಿಕ್ರಿಯಿಸಿ, ಅವರಿಗೆ ಅವರದ್ದೇ ಆದ ವೈಯಕ್ತಿಕ ಕೆಲಸಗಳು ಇರಬಹುದು. ಸಭೆಯಲ್ಲಿ ಭಾಗವಹಿಸುವಂತೆ ಸಿಎಂ ನನಗೆ ಸೂಚನೆ ಕೊಟ್ಟಿದ್ದರು. ಅದರಂತೆ ಭಾಗವಹಿಸಿದ್ದೇನೆ. ಉಮೇಶ್‍ಕತ್ತಿ ಮತ್ತಿತರರು ಯಾವ ಕಾರಣಕ್ಕೆ ಸಭೆಯಲ್ಲಿ ಭಾಗವಹಿಸಿಲ್ಲ ಎಂಬುದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ