ಹೊಸದಿಲ್ಲಿ: ಸಂಚಾರ ನಿಯಮ ಉಲ್ಲಂಘಿಸಿದ ಟ್ರಕ್ ಚಾಲಕನೋರ್ವನಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಪೊಲೀಸ್ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮಿತಿಮೀರಿದ ಲೋಡ್ ಸೇರಿದಂತೆ ಇತರ ಸಂಚಾರ ನಿಮಯ ಉಲ್ಲಂಘನೆಗೆ ಇಷ್ಟು ಜುಲ್ಮಾನೆ ಹಾಕಲಾಗಿದೆ. ಹೊಸ ನಿಯಮಾವಳಿ ಜಾರಿಗೆ ಬಂದ ಬಳಿಕ ದೇಶದಲ್ಲೇ ವಿಧಿಸಿದ ದುಬಾರಿ ಮೊತ್ತ ಇದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಿತಿಮೀರಿ ಲೋಡ್ ತುಂಬಿಕೊಂಡು ಹೋಗುತ್ತಿದ್ದ ಹರಿಯಾಣ ಮೂಲದ ಟ್ರಕ್ ಚಾಲಕ ದೆಹಲಿಯ ಜಿ.ಟಿ. ಕರ್ನಲ್ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ದೆಹಲಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಗೆ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಬಳಿಕ ಟ್ರಕ್ ಮಾಲೀಕ ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದೇಶದೆಲ್ಲೆಡೆ ಭಾರೀ ಮೊತ್ತದ ದಂಡವನ್ನು ಹಾಕಲಾಗುತ್ತಿದೆ. ಈ ಹಿಂದೆ ರಾಜಸ್ಥಾನದ ಟ್ರಕ್ ಡ್ರೈವರ್ ಒಬ್ಬನಿಗೆ ಬರೋಬ್ಬರಿ ರೂ. 1.41 ಲಕ್ಷ ದಂಡ ವಿಧಿಸಿದ್ದರು. ಅಂತೆಯೇ ಒರಿಸ್ಸಾದಲ್ಲಿ ಆಟೊ ಚಾಲಕನಿಗೆ 80 ಸಾವಿರ ರೂಪಾಯಿ ದಂಡ ಹಾಕಲಾಗಿತ್ತು. ಇದುವೇ ದೇಶದಲ್ಲಿಯೇ ಅತ್ಯಧಿಕ ದಂಡವಾಗಿತ್ತು. ಈ ಬೆನ್ನಲ್ಲೀಗ ದೆಹಲಿಯಲ್ಲಿ ಟ್ರಕ್ ಚಾಲಕನಿಗೆ 2 ಲಕ್ಷ ದಂಡ ವಿಧಿಸುವ ಮೂಲಕ ಹೊಸ ಇತಿಹಾಸ ದಾಖಲಿಸಿದ್ದಾರ ಪೊಲೀಸರು.
ದೇಶದಲ್ಲಿ ಅಪಘಾತ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ಸಂಚಾರಿ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಅಪಘಾತಕ್ಕೆ ಪ್ರಮುಖ ಕಾರಣ. ಹೀಗಾಗಿ ಸಂಚಾರ ನಿಯಮವನ್ನು ಗಾಳಿಗೆ ತೂರುವವರಿಗೆ ಹೆಚ್ಚಿನ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೊಳಪಡಿಸುವ ರೀತಿಯ ಹೊಸ ಮೋಟಾರು ವಾಹನ ತಿದ್ದುಪಡಿ ವಿಧೇಯಕ ಕೇಂದ್ರ ಜಾರಿಗೆ ತಂದಾಗಿದೆ.
ಕಳೆದ ಈ ವಿಧೆಯಕಕ್ಕೆ ಲೋಕಸಭೆಯಲ್ಲಿ ಅನುಮತಿ ಸಿಕ್ಕಿತ್ತಾದರೂ ರಾಜ್ಯ ಸಭೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಕೊನೆಗೂ ಈ ವಿಧೇಯಕಕ್ಕೆ ರಾಜ್ಯಸಭೆಯಲ್ಲೂ ಅನುಮತಿ ಸಿಕ್ಕಿತ್ತು. ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕ ಬಳಿಕ ಜಾರಿಗೆ ಬಂದ ಈ ವಿಧೇಯಕದಲ್ಲಿ ಕನಿಷ್ಠ ದಂಡದ ಮೊತ್ತ 1 ಸಾವಿರ ರೂ. ಇದೆ. ಅಲ್ಲದೆ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶ ಮಾಡಿಕೊಡಲಾಗಿದೆ.