ಡಿಎಲ್ ಇಲ್ಲದವರ ನೆರವಿಗೆ ಬಂದ ಸಿಂಘಂ ರವಿ ಚೆನ್ನಣ್ಣನವರ್

ಡಿಎಲ್ ಇಲ್ಲದವರ ನೆರವಿಗೆ ಬಂದ ಸಿಂಘಂ ರವಿ ಚೆನ್ನಣ್ಣನವರ್

ಬೆಂಗಳೂರು, ಸೆಪ್ಟೆಂಬರ್ 12: ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆ ಬಂದ ನಂತರ ಪೊಲೀಸರು ವಾಹನ ಸವಾರರಿಗೆ ಹೆಚ್ಚು-ಹೆಚ್ಚು ದಂಡ ಹಾಕಲು ಉತ್ಸುಕರಾಗಿದ್ದರೆ, ಸಿಂಘಂ ಖ್ಯಾತಿಯ ರವಿ ಚೆನ್ನಣ್ಣನವರ್ ಮಾತ್ರ ಇದಕ್ಕೆ ಅಪವಾದವಾಗಿದ್ದಾರೆ.

ಡಿ.ಎಲ್ ಇಲ್ಲದವರಿಗೆ ದಂಡ ಹಾಕಲು ಉತ್ಸುಕತೆಯ ಬದಲಾಗಿ, ಡಿಎಲ್ ಇಲ್ಲದ ವಾಹನ ಸವಾರರಿಗೆ ಪರವಾನಗಿ ಮಾಡಿಸಿಕೊಡಲು ಅಭಿಯಾನ ಪ್ರಾರಂಭಿಸಿದ್ದಾರೆ. ಇದೊಂದು ಮಾದರಿ ಅಭಿಯಾನವಾಗಿ ಗಮನ ಸೆಳೆಯುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ಎಸ್‌ಪಿ ಆಗಿರುವ ರವಿ ಚೆನ್ನಣ್ಣನವರ್ ಅವರು ಡಿಎಲ್ ಇಲ್ಲದವರಿಗೆ ಡಿಎಲ್ ಮಾಡಿಸಲೆಂದೇ ಅಭಿಯಾನ ಆರಂಭಿಸಿದ್ದು, ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಲ್ಲೂಕುಗಳಲ್ಲಿಯೂ ಈ ಅಭಿಯಾನ ನಡೆಯಲಿದೆ.

ಆರ್‌ಟಿಓ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿರುವ ರವಿ ಚೆನ್ನಣ್ಣನವರ್ ಅವರು, ಡಿಎಲ್ ಅಭಿಯಾನವನ್ನು ಸೆಪ್ಟೆಂಬರ್ 15 ರಿಂದ ಪ್ರಾರಂಭ ಮಾಡಲಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಈ ಡಿಎಲ್ ಕ್ಯಾಂಪ್‌ಗಳನ್ನು ಹಾಕಲಾಗುತ್ತದೆ.

ಅಭಿಯಾನದ ಅಡಿಯಲ್ಲಿ ಯಾವುದೇ ಹೆಚ್ಚುವರಿ ಹಣ ನೀಡದೆ, ಸೂಕ್ತ ದಾಖಲೆಗಳನ್ನು ನೀಡಿ ವಾಹನ ಸವಾರರು ಡಿಎಲ್ ಪಡೆಯಬಹುದಾಗಿದೆ. ರವಿ ಚೆನ್ನಣ್ಣನವರ್ ಅವರು ಪ್ರಾರಂಭಿಸಲು ಹೊರಟಿರುವ ಈ ಅಭಿಯಾನ ಭಾರಿ ಪ್ರಶಂಸೆಗೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ