ಪತ್ರಕರ್ತರನ್ನು ಉದ್ಯಮಿಗಳನ್ನಾಗಿ ನೋಡಲು ಊಹಿಸುವುದು ಕಷ್ಟವಾಗುತ್ತದೆ-ಸಚಿವ ಎಸ್.ಸುರೇಶ್

ಬೆಂಗಳೂರು, ಸೆ.12- ಪತ್ರಕರ್ತರು ಉದ್ಯಮಿಗಳಾಗಿ ಮಾರ್ಪಡುವ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಕರ್ತರ ಸಹಕಾರ ಸಂಘದ ಸಂಭ್ರಮಾಚರಣೆ ನಿಮಿತ್ತ ಪತ್ರಕರ್ತರು ಮತ್ತು ಉದ್ಯಮ ಕುರಿತ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಪತ್ರಕರ್ತರು ಉದ್ಯಮಿಯಾಗಿ ಬದಲಾಗುವ ಬಗ್ಗೆ ಎಲ್ಲಾ ಆಯಾಮಗಳಿಂದಲೂ ಸಾಕಷ್ಟು ಚರ್ಚೆಯಾಗಬೇಕು.ತಮ್ಮ ಪರಿದಿಯಲ್ಲಿ ಸಾಧ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಮಾಡಲು ಸಿದ್ಧವಿರುವುದಾಗಿ ಹೇಳಿದರು.

. ಏಕೆಂದರೆ ನಿರ್ಭಿತಿಯಿಂದ ಹಲವು ಸಂಗತಿಗಳನ್ನು ಬಯಲಿಗೆಳೆಯುವುದು ಪತ್ರಕರ್ತರು.ಆದರೆ, ಉದ್ಯಮದಲ್ಲಿ ಲಾಭ, ನಷ್ಟದ ಜತೆಗೆ ಉದ್ಯಮ ಬೆಳವಣಿಗೆಯತ್ತ ಗಮನ ಹರಿಸಲಾಗುತ್ತದೆ ಎಂದರು.

ಪತ್ರಕರ್ತರು ತಮ್ಮ ಶಕ್ತಿಯನ್ನು ಉದ್ಯಮವಾಗಿ ಮಾರ್ಪಡಿಸುವ ದಿನಗಳು ಮುಂದೆ ಬರಬಹುದು.ಇದಕ್ಕೆ ಸಾಕಷ್ಟು ಕಸರತ್ತು, ಮಾರ್ಗದರ್ಶನದ ಅಗತ್ಯವಿದೆ.ಈ ರೀತಿಯ ಚರ್ಚೆ ನಾಂದಿ ಹಾಡಿರುವುದು ಆರೋಗ್ಯರ ಬೆಳವಣಿಗೆ.ಏಕೆಂದರೆ ಪತ್ರಕರ್ತರ ಪರಿಸ್ಥಿತಿ ತುಂಬಾ ಕಷ್ಟದಲ್ಲಿದೆ.ಅದರಲ್ಲೂ ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರ ಸಂಕಷ್ಟಗಳು ಏನೆಂಬುದು ಅರಿವಿದೆ.ಉದ್ಯಮ ಸ್ಥಾಪಿಸಲು ಸಾಕಷ್ಟು ಅವಕಾಶ ಇರುವಂತೆಯೇ ಸವಾಲುಗಳು ಇವೆ. ಈ ಬಗ್ಗೆ ಸಾಕಷ್ಟು ಮಾರ್ಗದರ್ಶನದ ಅಗತ್ಯವಿದೆ ಎಂದು ಹೇಳಿದರು.

ಎಂಎಸ್‍ಎಂಇ ಹೊನ್ನಮಾನೆ ಅವರು ಉದ್ಯಮ ಸ್ಥಾಪನೆಗೆ ಇರುವ ಸರ್ಕಾರದ ಸೌಲಭ್ಯಗಳು ಕುರಿತು ಮಾತನಾಡಿ, ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ 25 ಲಕ್ಷ ದವರೆಗೂ ಉದ್ಯಮ ಸ್ಥಾಪನೆ ಮಾಡಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟವರು ನಗರ ಮತ್ತು ಗ್ರಾಮೀಣ ಪ್ರದೇಶ ಎರಡರಲ್ಲೂ ಉದ್ಯಮವನ್ನು ಸ್ಥಾಪಿಸಬಹುದಾಗಿದೆ.ಶೇ.35ರವರೆಗೂ ಸಹಾಯಧನ ಸೌಲಭ್ಯವಿದೆ.ಅದೇ ರೀತಿ ಮುಖ್ಯಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯಲ್ಲಿ 18ರಿಂದ 30 ವರ್ಷದ ವಯೋಮಾನದವರು ಗ್ರಾಮೀಣ ಭಾಗದಲ್ಲಿ ಉದ್ದಿಮೆ ಪ್ರಾರಂಭಬಹುದು. ಶೇ.30ರವರೆಗೂ ಸಹಾಯಧನವಿದ್ದು, ಅತಿ ಸಣ್ಣ ಕೈಗಾರಿಕೆಗೆ ಶೇ.5ರ ಬಡ್ಡಿ ಸಹಾಯ ಧನ ಇದೆ ಎಂದರು.

ಎಫ್‍ಕೆಸಿಸಿಐನ ಮಾಜಿ ಅಧ್ಯಕ್ಷ ತನ್ನಮ್ ವೆಂಕಟೇಶ್ ಪತ್ರಕರ್ತರಿಗೆ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಸ್ಥಾಪಿಸಲು ಇರುವ ಅವಕಾಶ ಕುರಿತು ಮಾತನಾಡಿ, ಪತ್ರಕರ್ತರು ಉದ್ಯೋಗಿ ಆಗಬೇಡಿ. ಉದ್ಯಮಿಯಾಗಿ. ಸಾಕಷ್ಟು ಅವಕಾಶವಿದ್ದು, ಸಮುದಾಯಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಯೋಚಿಸಿ ಉದ್ಯಮ ಪ್ರಾರಂಭಿಸಬೇಕು.ಸೇವಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಇವೆ ಎಂದು ಮಾಹಿತಿ ನೀಡಿದರು.
ಎಫ್‍ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್, ಹಿರಿಯ ಉಪಾಧ್ಯಕ್ಷ ಪೆರಿಕಲ್ ಸುಂದರ್, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಂದ್ರಕುಮಾರ್, ಉಪಾಧ್ಯಕ್ಷ ಎಸ್.ಲಕ್ಷ್ಮಿನಾರಾಯಣ, ಖಜಾಂಚಿ ಯತಿರಾಜು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ