ಇಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದಐಶ್ವರ್ಯ

ಬೆಂಗಳೂರು, ಸೆ.12- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರು ಇಂದು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು.
ಆರ್ಥಿಕ ಅಪರಾಧಗಳ ಆರೋಪಕ್ಕಾಗಿ ಬಂಧನಕ್ಕೊಳಗಾಗಿರುವ ಡಿ.ಕೆ.ಶಿವಕುಮಾರ್ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಪುತ್ರಿ ಐಶ್ವರ್ಯ ಅವರಿಗೂ ಇಡಿ ಸಮನ್ಸ್ ನೀಡಿತ್ತು.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನವದೆಹಲಿಯ ಲೋಕನಾಯಕ ಭವನದಲ್ಲಿರುವ ಆರನೇ ಮಹಡಿಯ ಇಡಿ ಕಚೇರಿಗೆ ಐಶ್ವರ್ಯ ಹಾಜರಾದರು.ಇದಕ್ಕೂ ಮುನ್ನ ತಮ್ಮ ಆರ್ಥಿಕ ಸಲಹೆಗಾರರು, ಆಡಿಟರ್‍ಗಳು ಮತ್ತು ವಕೀಲರ ಜತೆ ಐಶ್ವರ್ಯ ಸುದೀರ್ಘ ಸಮಾಲೋಚನೆ ನಡೆಸಿದರು.
ಕಳೆದ 2013ಮತ್ತು 2019ರ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಪುತ್ರಿ ಹೆಸರಿನಲ್ಲಿ ಘೋಷಿಸಿರುವ ಆಸ್ತಿ ಮೊತ್ತದಲ್ಲಿ ವ್ಯತ್ಯಾಸಗಳಿವೆ ಎನ್ನಲಾಗಿದೆ.

ಕೆಲವು ಸಂಸ್ಥೆಗಳಲ್ಲಿ ಐಶ್ವರ್ಯ ಹೆಸರಿನಲ್ಲಿ ಬಂಡವಾಳ ಹೂಡಿಕೆಯಾಗಿದ್ದು, ಒಂದಷ್ಟು ಸಾಲ ಕೂಡ ಇದೆ ಎನ್ನಲಾಗಿದೆ.ಹೀಗಾಗಿ ಇಡಿ ಅಧಿಕಾರಿಗಳು ಅದಕ್ಕೆ ಸಮಂಜಸ ಉತ್ತರ ಪಡೆಯಲು ಮುಂದಾಗಿದ್ದಾರೆ.

ಈ ಮೊದಲು ಡಿ.ಕೆ.ಶಿವಕುಮಾರ್ ಅವರ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ದಾಳಿ ಆದಾಗ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಜಾರಿ ನಿರ್ದೇಶನಾಲಯ, ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ, ಪುತ್ರಿ ಐಶ್ವರ್ಯ ಸೇರಿದಂತೆ ಹಲವಾರು ಮಂದಿಯನ್ನು ವಿಚಾರಣೆಗೊಳಪಡಿಸಿತ್ತು.ಈಗ ಮತ್ತೊಮ್ಮೆ ಸಮನ್ಸ್ ನೀಡಿ ಐಶ್ವರ್ಯ ಅವರ ವಿಚಾರಣೆ ನಡೆಸಲಾಗಿದೆ.
ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಸೂಚನೆ ಆಧರಿಸಿ ದುರುದ್ದೇಶ ಪೂರ್ವಕವಾಗಿ ಕ್ರಮ ಕೈಗೊಂಡಿದೆ ಎಂದು ಆರೋಪಿಸಿ ನಿನ್ನೆ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದವು. ಅದರ ಬೆನ್ನಲ್ಲೇ ಇಂದು ಐಶ್ವರ್ಯ ಅವರನ್ನು ಇಡಿ ವಿಚಾರಣೆ ನಡೆಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ