ಬೆಂಗಳೂರು,ಸೆ.12-ನೆರೆ ಹಾಗೂ ಪ್ರವಾಹ ಸಂದರ್ಭದಲ್ಲಿ ಸರ್ಕಾರ ನಿರ್ಮಿಸಿದ್ದ ಗಂಜಿ ಕೇಂದ್ರಗಳನ್ನು ಈಗ ಮುಚ್ಚಲಾಗಿದ್ದು, ಸರ್ಕಾರ ಸಂತ್ರಸ್ತರಿಗೆ ಕನಿಷ್ಟ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಡದೆ ನಿರ್ಲಕ್ಷ್ಯ ಮಾಡಿದೆ. ಇದರ ವಿರುದ್ಧ ಕಾಂಗ್ರೆಸ್ ಶೀಘ್ರದಲ್ಲೇ ಬೃಹತ್ ಪ್ರತಿಭಟನೆಯನ್ನು ಆಯೋಜಿಸುತ್ತದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಷ್ಟೇ ಗಂಜಿ ಕೇಂದ್ರಗಳಲ್ಲಿ ಇರಲಿಲ್ಲ.ಶ್ರೀಮಂತರು, ಮಧ್ಯಮ ವರ್ಗದವರು ಕೂಡ ಇದ್ದಾರೆ. ಸರ್ಕಾರ ಪ್ರವಾಹ ತಗ್ಗಿದ ತಕ್ಷಣ ಗಂಜಿ ಕೇಂದ್ರಗಳನ್ನು ಮುಚ್ಚಿದೆ. ಮಳೆಯಲ್ಲಿ ನೆಂದು ಶೀಥಿಲಗೊಂಡಿರುವ ಮನೆಗಳಲ್ಲೇ ಸಂತ್ರಸ್ತರು ಜೀವ ಅಂಗೈಯಲ್ಲಿಡಿದು ಬದುಕುವ ಪರಿಸ್ಥಿತಿ ಬಂದಿದೆ.
ಹೊಸದಾಗಿ ಮನೆ ಕಟ್ಟಿಕೊಡುವವರೆಗೂ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಡಿ ಎಂದು ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನೆರೆ ಸಂತ್ರಸ್ತರಿಗೆ ಸ್ಪಂದಿಸುವ ಮನಸ್ಸಾಗಲಿ, ಕಾಳಜಿಯಾಗಲಿ, ಬದ್ದತೆಯಾಗಲಿ ಈ ಸರ್ಕಾರಕ್ಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರಿಗೆ 10 ಸಾವಿರ ರೂ.ತಾತ್ಕಾಲಿಕ ಪರಿಹಾರ ನೀಡಿದ್ದನೇ ದೊಡ್ಡದಾಗಿ ಬಿಂಬಿಸಿಕೊಳ್ಳಲಾಗುತ್ತಿದೆ. ಆ 10 ಸಾವಿರ ರೂ.ಗಳಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಧವಸಧಾನ್ಯ, ಬಟ್ಟೆಗಳು ಎಲ್ಲವೂ ಕೊಚ್ಚಿಹೋಗಿವೆ.ಬಹುತೇಕ ಮನೆಗಳು ಈಗಲೂ ಆಗಲೋ ಬೀಳುವ ಸ್ಥಿತಿಯಲ್ಲಿವೆ. ಕನಿಷ್ಟ ಒಂದು ಲಕ್ಷ ರೂ.ತಾತ್ಕಾಲಿಕ ಪರಿಹಾರ ಕೊಡಿ ಎಂದು ಒತ್ತಾಯ ಮಾಡಲಾಗಿತ್ತು. ಆದರೆ ಸರ್ಕಾರ 10 ಸಾವಿರ ಕೊಟ್ಟಿರುವುದಾಗಿ ಹೇಳಿ ಕೈತೊಳೆದುಕೊಂಡಿದೆ.ಅದು ಕೂಡ ಎಲ್ಲಾ ಸಂತ್ರಸ್ತರಿಗೂ ತಲಪಿಸಿಲ್ಲ.
ಮುಖ್ಯಮಂತ್ರಿಗಳು, ಗೃಹ ಸಚಿವರು ಬೇರೆ ಬೇರೆ ಲೆಕ್ಕಗಳನ್ನು ಹೇಳುತ್ತಿದ್ದಾರೆ.ಸಂತ್ರಸ್ತರ ಸಂಕಷ್ಟ ತೀವ್ರವಾಗಿದೆ. ಕೇಂದ್ರ ಸರ್ಕಾರ ಈವರೆಗೂ ಯಾವುದೇ ಪರಿಹಾರ ನೀಡಿಲ್ಲ. ಒಟ್ಟು 38 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸರ್ಕಾರವೇ ಹೇಳುತ್ತಿದೆ. ಅದರಲ್ಲಿ ಕಾಲು ಭಾಗದಷ್ಟು ಕೇಳಲು ನಮಗೆ ಅರ್ಹತೆ ಇಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.ರಾಜ್ಯ ಸರ್ಕಾರವು ಪರಿಹಾರ ನೀಡುತ್ತಿಲ್ಲ, ಕೇಂದ್ರವೂ ಸಹಾಯ ಮಾಡುತ್ತಿಲ್ಲ. ಸಂತ್ರಸ್ತರ ಪರಿಸ್ಥಿತಿ ಸುಧಾರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಪ್ರತಿ ಮನೆ ಪುನರ್ ನಿರ್ಮಾಣಕ್ಕೆ 5 ಲಕ್ಷದ ಬದಲಾಗಿ 10 ಲಕ್ಷ ರೂ.ನೀಡುವಂತೆ ಮನವಿ ಮಾಡಿದ್ದೆವು. ಉ.ಕ ಭಾಗದಲ್ಲಿ ಅವಿಭಕ್ತ ಕುಟುಂಬದ ಪದ್ಧತಿ ಇದ್ದು, ಒಂದು ಮನೆಯಲ್ಲಿ ಸುಮಾರು 4ರಿಂದ 5 ಕುಟುಂಬಗಳು ವಾಸವಿರುತ್ತವೆ. ಪರಿಹಾರ ನೀಡುವಾಗ ಒಟ್ಟು ಮನೆಯನ್ನು ಲೆಕ್ಕ ಹಾಕದೆ ಕುಟುಂಬಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದ್ದು, ರಾಜ್ಯ ಸರ್ಕಾರ ಅದನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳೆನಷ್ಟಕ್ಕೆ ಎಕರೆಗೆ ತಲಾ 50ರಿಂದ ಒಂದು ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಲಾಗಿತ್ತು. ಸರ್ಕಾರ ಅದನ್ನು ಪರಿಗಣಿಸಿಲ್ಲ. ಒಟ್ಟು ನಷ್ಟದ ಅಂದಾಜು ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಕೇವಲ ಬಿದ್ದು ಹೋಗಿರುವ ಮನೆಗಳಿಗೆ ಮಾತ್ರ ಪರಿಹಾರ ನೀಡುವುದಾಗಿ ಹೇಳಲಾಗುತ್ತಿದೆ.ಪ್ರವಾಹ ನೀರಿನಲ್ಲಿ ನೆಂದು ಬಿದ್ದುವ ಹೋಗುವ ಸ್ಥಿತಿಯಲ್ಲಿರುವ ಮಣ್ಣಿನ ಗೋಡೆಗಳ ಮನೆಗಳನ್ನು ಪರಿಹಾರದ ವ್ಯಾಪ್ತಿಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ-ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಬೆಳಗಾವಿ ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಲಕ್ಷ ಮಂದಿ ನೆರೆ ಸಂತ್ರಸ್ತರನ್ನು ಸೇರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಜೊತೆ ಈಗಾಗಲೇ ಚರ್ಚಿಸಲಾಗಿದೆ.ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಚರ್ಚಿಸಿ ಶೀಘ್ರವೇ ಸರ್ಕಾರವನ್ನು ಎಚ್ಚರಿಸಲು ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಮಾಜಿ ಸಚಿವರಾದ ಸತೀಶ್ಜಾರಕಿಹೊಳಿ, ಶಾಸಕರಾದ ಆನಂದ್ ನ್ಯಾಮೇಗೌಡ,ಮಾಜಿ ಶಾಸಕ ಮಹಂತೇಶ್ ಕೌಜಲಗಿ ಮತ್ತಿತರರು ಗೋಷ್ಠಿಯಲ್ಲಿದ್ದರು.